ಮುಖಪುಟ /ನಮ್ಮ ದೇವಾಲಯಗಳು

ತುರುವೇಕೆರೆ ತಾಲೂಕು ಸಂಪಿಗೆಯ ಶ್ರೀನಿವಾಸಸ್ವಾಮಿ

*ಟಿ.ಎಂ.ಸತೀಶ್

Sampige Srinivasa templeತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ಕೇಂದ್ರದಿಂದ 27 ಕಿಲೋ ಮೀಟರ್ ದೂರದಲ್ಲಿರುವ ಸಂಪಿಗೆ ಒಂದು ಪುಟ್ಟ ಪಟ್ಟಣ. ಹಿಂದೆ ಸಂಪಿಗೆ ಹಳ್ಳಿ ಎಂದೇ ಖ್ಯಾತವಾಗಿದ್ದ ಈ ಗ್ರಾಮ ಕನ್ನಡದ ಕಣ್ವ ಬಿ.ಎಂ. ಶ್ರೀಕಂಠಯ್ಯ(ಬಿ.ಎಂ.ಶ್ರೀ) ಅವರು ಹುಟ್ಟಿದ ಊರು.

ಇತಿಹಾಸ ಮತ್ತು ಪುರಾಣ ಪ್ರಸಿದ್ಧವಾದ ಈ ಊರಿನಲ್ಲಿ ಪುರಾತನವಾದ ಶ್ರೀನಿವಾಸದೇವರ ದೇವಾಲಯ ಇದೆ. ಈ ಊರಿನ ಇತಿಹಾಸ ಮಹಾಭಾರತದ ಕಾಲಕ್ಕೆ ಹೋಗುತ್ತದೆ. ಶ್ರೀಕೃಷ್ಣನ ಪರಮ ಭಕ್ತನಾದ ಸುಧನ್ವ ಸಂಪಿಗೆಯಲ್ಲಿ ಆಳುತ್ತಿದ್ದ ಎಂದೂ ಹೇಳಲಾಗುತ್ತದೆ.

ಮಹಾಭಾರತ ಕಾಲದಲ್ಲಿ ಚಂಪಕಾಪುರಿ ಎಂಬ ಹೆಸರಿನಿಂದ ಈಗಿನ ಸಂಪಿಗೆ ಸುಧನ್ವನ ರಾಜಧಾನಿಯಾಗಿತ್ತು ಎಂದೂ ಹೇಳಲಾಗುತ್ತದೆ. ದ್ವಾಪರಯುಗ ಮುಗಿದು, ಕಲಿಯುಗ ಆರಂಭವಾಗುವ ಸಂದರ್ಭದಲ್ಲಿ ತನ್ನ ಪರಮ ಭಕ್ತನಾಗಿದ್ದ ಸುಧನ್ವನಿಗೆ ಶಂಖ, ಚಕ್ರ, ಗದಾ, ಪದ್ಮ ಧಾರಿಯಾಗಿ ಶ್ರೀಕೃಷ್ಣ ಇಲ್ಲಿ ದರ್ಶನ ಕೊಟ್ಟನಂತೆ. ಹೀಗೆ ದರ್ಶನಕೊಟ್ಟ ಕೃಷ್ಣ ಮೂಲ ಶ್ರೀನಿವಾಸದೇವರಾಗಿ ಇಲ್ಲಿ ನೆಲೆಸಿದ ಎಂಬ ಐತಿಹ್ಯವೂ ಇದೆ.

ಹೀಗಾಗಿಯೇ ತಿರುಪತಿಯ ವೆಂಕಟೇಶ್ವರ ದೇವರಿಗೂ ಮೊದಲು ಇಲ್ಲಿ ಶ್ರೀನಿವಾಸ ನೆಲೆಸಿದ್ದ ಎಂದು ಹೇಳಲಾಗುತ್ತದೆ. ಅಂತೆಯೇ ಸಂಪಿಗೆಯ ನಾರಾಯಣ ಮೂಲ ಶ್ರೀನಿವಾಸ ಎಂದೂ ಕರೆಸಿಕೊಂಡಿದ್ದಾನೆ. ತಿರುಪತಿಯ ಶ್ರೀನಿವಾಸ ದೇವರಿಗೆ ನಡೆಯು ಎಲ್ಲ ಪೂಜಾ ಕೈಂಕರ್ಯಗಳು ಈ ವೆಂಕಟರಮಣಸ್ವಾಮಿಗೆ ನಡೆಯುತ್ತದೆ.

sampige lakshmi ಇಲ್ಲಿರುವ ದೇವಾಲಯಕ್ಕೆಮೂರು ಅಂತಸ್ತಿನ ಸುಂದರ ಗೋಪುರದ ಪ್ರವೇಶ ದ್ವಾರವಿದೆ. ವಿಜಯನಗರ ಶೈಲಿಯಲ್ಲಿರುವ ಈ ಗೋಪುರ ದ್ವಾರದಿಂದ ಒಳ ಪ್ರವೇಶಿಸಿದರೆ ಸುಂದರ  ಶ್ರೀನಿವಾಸ ದೇವರ ದೇವಾಲಯ ಕಾಣುತ್ತಿದೆ. ದೇವಾಲಯದ ಹೊರಗೆ ಹಾಗೂ ಒಳ ಪ್ರಕಾರದಲ್ಲಿ ಎರಡು ಗರುಡಗಂಭಗಳು ಇವೆ. ಒಳ ಪ್ರಕಾರದಲ್ಲಿರುವ ಗರುಡಗಂಭಕ್ಕೆ ಹಿತ್ತಾಳೆಯ ತಗಡಿನ ಹೊದಿಕೆ ಹಾಕಲಾಗಿದೆ. ಶ್ರೀನಿವಾಸಸ್ವಾಮಿಯ ದೇವಾಲಯದ ಪ್ರವೇಶ ದ್ವಾರದ ಮೇಲೆ ಕಲ್ಯಾಣಾದ್ಭುತ ಗಾತ್ರಾಯ, ಕಾಮಿತಾರ್ಥ ಪ್ರದಾಯನೇ

ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ಮಂಗಳಂ ಎಂಬ ಶ್ಲೋಕ ಕಾಣುತ್ತದೆ. ಗೋಪುರದ ಗೂಡುಗಳಲ್ಲಿ ವಿಷ್ಣುವಿನ ವಿವಿಧ ಅವತಾರಗಳ ಗಾರೆಯ ಶಿಲ್ಪಗಳಿವೆ.

ದೇವರ ಪ್ರಾರ್ಥನೆ ಮಾಡುತ್ತಾ ಒಳ ಪ್ರಾಕಾರದಲ್ಲಿನ ಶ್ರೀನಿವಾಸಸ್ವಾಮಿ ದೇವಾಲಯವನ್ನು ಪ್ರದಕ್ಷಿಣೆ ಹಾಕಿದರೆ ಲಕ್ಷ್ಮಿದೇವಿಯ ಗುಡಿ ಇದೆ. ಮನೋಹರವಾಗಿರುವ ಸಾಲಿಗ್ರಾಮ ಶಿಲೆಯ ಅಮ್ಮನವರ ದರ್ಶನ ಮಾಡಿ ಪ್ರದಕ್ಷಿಣೆ ಹಾಕಿ ಶ್ರೀನಿವಾಸಸ್ವಾಮಿ ದೇವಾಲಯ ಪ್ರವೇಶಿಸಿದರೆ, ವೈಕುಂಠದ ದ್ವಾರಪಾಲಕರಾದ ಜಯವಿಜಯರ ಶಿಲ್ಪಗಲು ಭಕ್ತರನ್ನು ಸ್ವಾಗತಿಸುತ್ತಾರೆ.

ಒಳ ಪ್ರವೇಶಿಸುತ್ತಿದ್ದಂತೆ ಎಡ ಭಾಗದಲ್ಲಿ ಆಳ್ವಾರರ ಪ್ರತಿಮೆಗಳನ್ನು ಕಾಣಬಹುದು. ಇನ್ನು ಶ್ರೀನಿವಾಸಸ್ವಾಮಿಯ ಗರ್ಭಗೃಹಕ್ಕೆ ಬೆಳ್ಳಿಯ ಬಾಗಿಲು ಮಾಡಿಸಲಾಗಿದ್ದು, ಇದರಲ್ಲಿ ವಿಷ್ಣುವಿನ ದಶಾವತಾರದ ಕೆತ್ತನೆಗಳಿವೆ.

Sampige Srinivasa swamyಗರ್ಭಗೃಹದಲ್ಲಿರುವ ಶ್ರೀನಿವಾಸನ ಕೃಷ್ಣವರ್ಣದ ಆಳೆತ್ತರದ ಶ್ರೀನಿವಾಸಸ್ವಾಮಿಯ ಮೂರ್ತಿ ಅಂತ್ಯತ ಮನೋಹರವಾಗಿದೆ. ಪುಷ್ಪಾಲಂಕಾರದಲ್ಲಿ ದೇವರ ಅಂದ ನೂರ್ಮಡಿಯಾಗುತ್ತದೆ.

ಪ್ರತಿವರ್ಷ ವೈಕುಂಠ ಏಕಾದಶಿಯಂದು ಇಲ್ಲಿ 30-40 ಸಾವಿರ ಭಕ್ತರು ಸೇರುತ್ತಾರೆ. ಸರತಿಯ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಾರೆ. ಪ್ರತಿ ಶನಿವಾರ ಹಾಗೂ ಭಾನುವಾರ ಇಲ್ಲಿ ಬರುವ ಭಕ್ತರಿಗೆ ಪ್ರಸಾದ ವಿನಿಯೋಗವೂ ನಡೆಯುತ್ತದೆ. ದೇವಾಲಯದ ಪಕ್ಕದಲ್ಲೇ ಇರುವ ಬಿ.ಎಂ.ಶ್ರೀ ಅವರ ತಾಯಿಯಿದ್ದ ಹಾಗೂ ಬಿಎಂಶ್ರೀ ಹುಟ್ಟಿದ ಮನೆಯನ್ನು ಸ್ಮಾರಕವಾಗಿ ಮಾಡಲಾಗಿದೆ. ವರ್ಷಕ್ಕೊಮ್ಮೆ ವೈಭವದಿಂದ ರಥೋತ್ಸವವೂ ಜರುಗುತ್ತದೆ.

ಹೋಗುವುದು ಹೇಗೆ ತುರುವೇಕೆರೆ ಪಟ್ಟಣದಿಂದ ಬಾಣಸಂದ್ರ ಮಾರ್ಗದಲ್ಲಿ ಸಾಗಿ ಎರಡು ಕಿಲೋ ಮೀಟರ್ ದಾಟುತ್ತಿದ್ದಂತೆ ಬಲ ಭಾಗದಲ್ಲಿ ಸಂಪಿಗೆಗೆ ದಾರಿ ಎಂಬ ಫಲಕ ಕಾಣುತ್ತದೆ ಈ ಮಾರ್ಗವಾಗಿ ಹೋದರೆ, ಮತ್ತೆ ಕೊಂಡಜ್ಜಿಯ ಕಡೆಗೆ ತಿರುಗುವ ರಸ್ತೆಯಲ್ಲಿ ಸಾಗಿ 13 ಕಿಲೋ ಮೀಟರ್ ಹೋದರೆ ಸಂಪಿಗೆ ಶ್ರೀನಿವಾಸ ದೇವರ ದೇವಾಲಯ ಕಾಣುತ್ತದೆ. ಅಲ್ಲಿಂದ ನಿಟ್ಟೂರು ಮಾರ್ಗವಾಗಿ ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಸೇರಬಹುದು. ಇಲ್ಲವೇ ಕಲ್ಲೂರು ಕ್ರಾಸ್ ಮಾರ್ಗವಾಗಿ ಹೆಬ್ಬೂರಿಗೆ ಹೋಗಿ ಶ್ರೀ ಕೋದಂಡರಾಮ ಆಶ್ರಮದ ಕಾಮಾಕ್ಷಿಯ ದರ್ಶನ ಮಾಡಿ ಕುಣಿಗಲ್ ಮಾರ್ಗವಾಗಿ ಬೆಂಗಳೂರಿನತ್ತ ಬರಬಹುದು.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮ ದೇವಾಲಯಗಳು