ಮುಖಪುಟ /ನಮ್ಮದೇವಾಲಯಗಳು  

ಸೋದೆಯ ತ್ರಿವಿಕ್ರಮ ದೇವಾಲಯ

ವಾದಿರಾಜರು ಸಶರೀರಿಗಳಾಗಿ ಬೃಂದಾವನಸ್ಥರಾಗಿರುವ ಶಾಲ್ಮಲಿ ತಟದ ಪುಣ್ಯ ಕ್ಷೇತ್ರ

Sode, Sonde, Trivikrama Temple, Vadiraja Mutt, Sirasi, Shalmali river, kannadaratna.com, ourt temple, T.M.Satish, temples of Karnataka, karnataka Temples. *ಟಿ.ಎಂ. ಸತೀಶ್

ಉತ್ತರ ಕನ್ನಡ ಜಿಲ್ಲೆಯ ಮಾರಿಕಾಂಬೆಯ ನೆಲೆವೀಡು ಶಿರಸಿಗೆ 20 ಕಿ.ಮೀ. ದೂರದಲ್ಲಿರುವ ಸೋದೆ ಶ್ರೀ ವಾದರಾಜರು ಸಶರೀರಿಗಳಾಗಿ ಬೃಂದಾವನಸ್ಥರಾಗಿರುವ ಪುಣ್ಯಕ್ಷೇತ್ರ. ಪರಮಪವಿತ್ರವಾದ ಸೋದೆ ತ್ರಿವಿಕ್ರಮ ದೇವರು ನೆಲೆಸಿಹ ದಿವ್ಯ ತಾಣವೂ ಹೌದು. ಸೋದೆಯ ಶ್ರೀ ವಾದಿರಾಜ ಮಠದ ಆವರಣದಲ್ಲಿಯೇ ತ್ರಿವಿಕ್ರಮ ದೇವರ ಹಾಗೂ ತಾಯಿ ರಮಾದೇವಿಯವರ ಸುಂದರ ಹಾಗೂ ಪುರಾತನ ಭವ್ಯ ದೇಗುಲವಿದೆ.

ಸ್ಥಳ  ಪುರಾಣದ ರೀತ್ಯ ಒಮ್ಮೆ ಶ್ರೀ. ವಾದಿರಾಜರಿಗೆ ತ್ರಿವಿಕ್ರಮ ದೇವರನ್ನು ಪೂಜಿಸಬೇಕೆಂಬ ಇಚ್ಛೆ ಮೂಡಿತಂತೆ. ತತ್ ಕ್ಷಣವೇ ಹಾಗೆ ಸಂಕಲ್ಪವನ್ನೂ ಮಾಡಿದರಂತೆ. ತಮ್ಮ ಆಜ್ಞೆಯನ್ನು ಪರಿಪಾಲಿಸುತ್ತಿದ್ದ ಭೂತರಾಜರನ್ನು ಕಳುಹಿಸಿ, ವೇದವ್ಯಾಸರನ್ನು ಸಂಪರ್ಕಿಸಿ, ಅವರ ನೆರವಿನಿಂದ ದೇವತೆಗಳನ್ನು ಕೋರಿ ತ್ರಿವಿಕ್ರಮ ದೇವರನ್ನು ಬದರಿಕಾಶ್ರಮದಿಂದ ಸೋದೆಗೆ ಕರೆತಂದು ಪೂಜಿಸಿದರಂತೆ.

ಭೂತರಾಜರು ರಥದಲ್ಲಿ ವಿರಾಜಮಾನರಾಗಿದ್ದ ಶ್ರೀ. ತ್ರಿವಿಕ್ರಮರನ್ನು ರಥ ಸಹಿತ ಹೊತ್ತು ತಂದರಂತೆ. ಭೂತರಾಜರು ರಥದ ಸಹಿತ ತ್ರಿವಿಕ್ರಮ ದೇವರನ್ನು ಕರೆತರುವಾಗ, ರಾಕ್ಷಸನೊಬ್ಬ ಅಡ್ಡ ಬಂದನಂತೆ, ಆಗ ಭೂತರಾಜರು, ತಾವು ಹೊತ್ತಿದ್ದ ರಥದ ಒಂದು ಚಕ್ರ ಕಿತ್ತು ಎಸೆದು ರಾಕ್ಷಸ ಸಂಹಾರ ಮಾಡಿದರಂತೆ. ಹೀಗಾಗಿಯೇ ದೇವಾಲಯದಲ್ಲಿರುವ ರಥಮಂಟಪದಲ್ಲಿ ಕೇವಲ 3 ಚಕ್ರ ಮಾತ್ರವಿರುವುದನ್ನು ಕಾಣಬಹುದು.

Sode, Sonde, Trivikrama Temple, Vadiraja Mutt, Sirasi, Shalmali river, kannadaratna.com, ourt temple, T.M.Satish, temples of Karnataka, karnataka Temples. ಪ್ರಧಾನ ಗರ್ಭಗೃಹದಲ್ಲಿ ಶ್ರೀ. ತ್ರಿವಿಕ್ರಮ ದೇವರ ಸುಂದರ ಮೂರ್ತಿಯಿದೆ. ಈ ಮೂರ್ತಿಯನ್ನು ವಾದಿರಾಜರು 1582ರಲ್ಲಿ ಅಂದರೆ ಶಾಲಿವಾಹನ ಶಕ 1504ರ ವೈಶಾಖ ಶುದ್ಧ ಪೌರ್ಣಿಮೆಯಂದು ಪ್ರತಿಷ್ಠಾಪನೆ ಮಾಡಿದರು ಎಂದು ಹೇಳಲಾಗುತ್ತದೆ.

ಇಲ್ಲಿ  ರಮಾದೇವಿಯವರ ಸುಂದರ ಕೃಷ್ಣ ಶಿಲಾ ಮೂರ್ತಿಯೂ ಇದೆ. ದೇವಾಲಯ ವಿಶಾಲವಾಗಿದ್ದು, ದೇವಾಲಯದ ಅಂಗಣದ ಈಶಾನ್ಯದಲ್ಲಿ ಸೋದೆಯಲ್ಲಿರುವ ಪಂಚ ಗಂಗೆಗಳ ಪೈಕಿ ಒಂದಾದ ಆಕಾಶಗಂಗೆಯಿದೆ. ರಥಬೀದಿಯ ದಕ್ಷಿಣ ಪಾರ್ಶ್ವದಲ್ಲಿ ದೇವಾಲಯಕ್ಕೆ ಜಮೀನು ಉಂಬಳಿ ಬಿಟ್ಟಿರುವ ಬಗ್ಗೆ ಶಿಲಾಶಾಸನವಿದೆ.

Sode, Sonde, Trivikrama Temple, Vadiraja Mutt, Sirasi, Shalmali river, kannadaratna.com, ourt temple, T.M.Satish, temples of Karnataka, karnataka Temples. ಸಂಪೂರ್ಣ ಕಲ್ಲಿನಿಂದ ನಿರ್ಮಿಸಿದ ಈ ದೇವಾಲಯದ ಹೊರಬಿತ್ತಿಯ ಅಲ್ಲಲ್ಲಿ ಕೆಲವು ಕೆತ್ತನೆಗಳಿವೆ. ಗರ್ಭಗೃಹದ ಮೇಲ್ಭಾಗದಲ್ಲಿ ಕಳಶ ಸಹಿತವಾದ ಸುಂದರ ಗೋಪುರವಿದೆ.  ದೇವಾಲಯದ ಎದುರು ಎತ್ತರವಾದ ಗರುಡಗಂಬವಿದೆ. ಈ ಕಲ್ಲಿನ ಕಂಬದ ಮೇಲ್ಭಾಗದಲ್ಲಿ ಕಲಾತ್ಮಕವಾದ ಪುಟ್ಟ ಮಂಟಪದ ಗೂಡಿದ್ದು ಇದರಲ್ಲಿ ಗರುಡನ ವಿಗ್ರಹವಿದೆ. ನಾಲ್ಕೂ ಕಡೆ ಗಂಟೆಗಳನ್ನು ಅಳವಡಿಸಲಾಗಿದೆ.

ಪ್ರತಿವರ್ಷ ದೇವರಿಗೆ ರಥೋತ್ಸವ ನಡೆಯುತ್ತದೆ.  ರಥೋತ್ಸವದ ಹಿಂದಿನ ದಿನ ರಾತ್ರಿ ದೇವಾಲಯದ ಈಶಾನ್ಯದಲ್ಲಿರುವ ಭೂತರಾಜರಿಗೆ ದಂಡೆ ಬಲಿ ಎಂಬ ವಿಶೇಷ ಉತ್ಸವ ಜರುಗುತ್ತದೆ. ತ್ರಿಧಾಮಗಳಲ್ಲಿ ಒಂದೆಂಬ ಖ್ಯಾತಿಯೂ ಕ್ಷೇತ್ರಕ್ಕಿದ್ದು, ಇದನ್ನು ಭೂವೈಕುಂಠ ಎನ್ನುತ್ತಾರೆ.

ಶಿರಸಿಯಿಂದ ಸೋದೆಗೆ  20 ಕಿ.ಮೀ ಮಾತ್ರ. ಮಾರ್ಗ ಮಧ್ಯೆ ಸಹಸ್ರಲಿಂಗ ಕ್ಷೇತ್ರ ಹಾಗೂ ಸ್ವರ್ಣವಲ್ಲಿ ಮಠವನ್ನೂ ನೋಡಬಹುದು. ಶಿರಸಿಯಿಂದ ನೇರ ಬಸ್ ಸೌಲಭ್ಯವಿದೆ. ಭಕ್ತರ ಅನುಕೂಲಕ್ಕಾಗಿ ಭವ್ಯವಾದ ವಸತಿಗೃಹವೂ ಇದೆ.

ಮುಖಪುಟ /ನಮ್ಮದೇವಾಲಯಗಳು