ಮುಖಪುಟ /ನಮ್ಮದೇವಾಲಯಗಳು 

ಸೌತಡ್ಕ ಬಯಲು ಮಹಾಗಣಪ ಕ್ಷೇತ್ರ
 

*ವಿ.ನಂಜುಂಡಪ್ಪ, ಪತ್ರಕರ್ತರು.

Soutadka, Ganesha, South Canara, ದಕ್ಷಿಣ ಕನ್ನಡ, ಸೌತಡ್ಕ, ಗಣಪತಿ.ದೇವಾಲಯಗಳೆಂದೊಡನೆ ನಮಗೆ ಒಂದು ಕಟ್ಟಡ, ಮಂಟಪ, ಗರ್ಭಗೃಹ, ಪ್ರಾಕಾರ, ಗೋಪುರಗಳ ಕಲ್ಪನೆ ಕಣ್ಣಮುಂದೆ ಕಾಣುತ್ತದೆ. ಆದರೆ, ಸೌತಡ್ಕದ ದೇವಾಲಯ ನೋಡಿದಾಗ, ಬಯಲು ಆಲಯದೊಳಗೋ, ಆಲಯ ಬಯಲೊಳಗೋ ಎಂಬ ಕವಿವಾಣಿ ನೆನಪಿಗೆ ಬರುತ್ತದೆ.

ಇಲ್ಲಿ ಗುಡಿಯಿಲ್ಲದ ದೇವಾಲಯವದೆ. ಬಯಲು ಆಲಯದಲ್ಲಿ ಗಣಪತಿ ವೀರಾಜಮಾನನಾಗಿದ್ದಾನೆ. ವನಮಹಾಗಣಪತಿ ಎಂದೂ ಖ್ಯಾತವಾದ ಈ ಗಣಪನ ನೋಡಲು ಬೆಂಗಳೂರು ಮಂಗಳೂರು ಹೆದ್ದಾರಿಯಿಂದ ಕೊಕ್ಕಡದಿಂದ ಸ್ವಲ್ಪದೂರ ಕ್ರಮಿಸಿದರೆ, ಸೌತಡ್ಕ ಶ್ರೀ ಮಹಾಗಣಪತಿಯ ಪುರದ್ವಾರ ಸ್ವಾಗತಿಸುತ್ತದೆ. ಈ ದ್ವಾರ ಪ್ರವೇಶಿಸಿ ರಸ್ತೆಯಲ್ಲಿ ಸಾಗಿ ಸೌತಡ್ಕಕ್ಕೆ ಹೋಗಬೇಕು. ಪೇಟೆಯ ಸದ್ದುಗದ್ದಲ ಇಲ್ಲದ ಪ್ರಶಾಂತ ವಾತಾವರಣದಲ್ಲಿ ಹಸಿರು ವನರಾಶಿಯ ನಡುವೆ ಮರದ ನೆರಳಿನಲ್ಲಿ ನೆಲೆಗೊಂಡ ಈ ಗಣಪನನ್ನು ಸುಮಾರು 12ನೇ ಶತಮಾನದಲ್ಲಿ ಪ್ರತಿಷ್ಠಾಪಿಸಲಾಗಿದೆ.

Soutadka, Ganesha, South Canara, ದಕ್ಷಿಣ ಕನ್ನಡ, ಸೌತಡ್ಕ, ಗಣಪತಿ.800 ವರ್ಷಗಳ ಹಿಂದೆ ಇಲ್ಲಿ ರಾಜರಾಳ್ವಿಕೆ ಇತ್ತು. ಯುದ್ಧಕಾಲದಲ್ಲಿ ಇಲ್ಲಿ ಪ್ರತಿಷ್ಠಾಪನೆ ಆಗಿದ್ದ ಗಣಪನ ದೇವಾಲಯ ನಾಶವಾಯ್ತು. ಗಣಪ ಇಲ್ಲಿನ ಮಕ್ಕಳ ಆಟದ ವಸ್ತುವಾದ. ಗೋವಳರ ಆಟದ ಮೂರ್ತಿಯಾದ ಗಣಪನಿಗೆ ದನಗಾಹಿಗಳು ಮನೆಯಿಂದ ತಾವು ತಿನ್ನಲು ತಂದ ಸೌತೆಕಾಯಿಯನ್ನು ನೇವೇದ್ಯ ಮಾಡಿ ನಂತರ ತಿನ್ನುತ್ತಿದ್ದರು. ಸೌತೆಯ ನೇವೇದ್ಯ ಪಡೆಯುತ್ತಿದ್ದ ಗಣಪನ ಈ ನಾಡು ಸೌತೆತಡ್ಕವೆಂದು ಹೆಸರು ಪಡೆಯಿತು.

ಈ ಗಣಪನಿಗೆ ಯಾವುದೇ ನಿರ್ಬಂಧವಿಲ್ಲ. ಗುಡಿಯ ಬಾಗಿಲು ಮುಚ್ಚಿಬಿಡುತ್ತಾರೆ ಹೋಗಿ ನೋಡಬೇಕು ಎಂಬ ಧಾವಂತವಿಲ್ಲ. ಸದಾ ಕಾಲ ಭಕ್ತರಿಗೆ ದರ್ಶನ ನೀಡುತ್ತಾ ಅವರ ಕೋರಿಕೆ ಈಡೇರಿಸುತ್ತಿರುವ ಬಯಲು ಗಣಪ ಭಕ್ತರಾಧೀನ. ಆಕಾಶವೇ ಇವಗೆ ಛಾವಣಿ, ಭೂಮಿಯೇ ಆಲಯ. ಬೀಸುವ ಗಾಳಿ, ಅಲುಗಾಡುವ ಎಲೆಗಳೇ ಛಾಮರ.  ಈಗ ಈ ದೇವರ ಸುತ್ತಲೂ ಕಬ್ಬಿಣದ ಕೊಳವೆಗಳಿಂದ ಮೇಲ್ಭಾಗದಲ್ಲಿ ಕಟಕಟೆಯನ್ನು ನಿರ್ಮಿಸಲಾಗಿದೆ. ಈ ಕೊಳವೆಗಳಿಗೆ ಗಂಟೆಗಳನ್ನು ಅಳವಡಿಸಲಾಗಿದೆ.

ಮುಂಭಾಗದಲ್ಲಿ ಕಮಾನಿನಾಕಾರದ ರಚನೆ ನಿರ್ಮಿಸಲಾಗಿದೆ. ಎತ್ತರದ ಜಗತಿಯಲ್ಲಿರುವ ಗಣಪನಿಗೆ ನಾಲ್ಕುರು ಹಂತದ ವೇದಿಕೆ ನಿರ್ಮಿಸಲಾಗಿದೆ.

Soutadka, Ganesha, South Canara, ದಕ್ಷಿಣ ಕನ್ನಡ, ಸೌತಡ್ಕ, ಗಣಪತಿ.ಇಲ್ಲಿರುವ ಗಣಪನಿಗೆ ಪೂಜೆ ಮಾಡಲು ಅರ್ಚಕರಿದ್ದಾರೆ. ಆದರೂ ಜನರು ಅರ್ಚಕರಿಲ್ಲದ ವೇಳೆಯಲ್ಲೂ ತಾವೇ ದೇವಾಲಯಕ್ಕೆ ಬಂದು ನಿರಾಡಂಬರ ಮೂಲ ಮೂರ್ತಿಯ ದರ್ಶನ ಪಡೆದು ತಾವೇ ಮನಃಪೂರ್ವಕವಾಗಿ ಪೂಜಿಸಿ ಕೃತಾರ್ಥರಾಗುತ್ತಾರೆ. ಈ ಗಣಪನಿಗೆ ಯಾವುದೇ ಆಡಂಬರವಿಲ್ಲದ ಮಾನಸಪೂಜೆಯೇ ಇಷ್ಟವಂತೆ. ಸೌತಡ್ಕ ಗಣಪನಿಗೆ ಜನಗಳಷ್ಟೇ ಭಕ್ತರಲ್ಲ. ಪಶುಪಕ್ಷಿಗಳೂ ತಮ್ಮ ಭಕ್ತಿ ಸಮರ್ಪಣೆ ಮಾಡುತ್ತವೆ. ಇಲ್ಲಿ ಮತ್ತೊಂದು ವಿಶೇಷವಿದೆ. ಮಧ್ಯಾಹ್ನದ ಪೂಜೆ ಮುಗಿಯುವುದನ್ನೇ ಕಾಯುವ ಗೋವೊಂದು ಇಲ್ಲಿದೆ. ಪೂಜೆ ಮುಗಿದ ಕೂಡಲೇ ಪ್ರತಿ ನಿತ್ಯ ಗೋವು ಮೆಟ್ಟಿಲು ಏರಿ ಗಣಪನ ಮುಂದೆ ನಿಂತು ತನ್ನ ತಲೆ ಅಲ್ಲಾಡಿಸಿ ನಮಿಸಿ, ಗಣಪನಿಗೆ ಹಾಕಿದ ಹೂವು, ಪತ್ರೆ ಎಲ್ಲವನ್ನೂ ತಿಂದು ಗಣಪನ ಸ್ವಚ್ಛಗೊಳಿಸಿ  ಹೋಗುತ್ತದೆ.

ಗಣಪನ ಎಡ ಮತ್ತು ಬಲ ಭಾಗದಲ್ಲಿ ಪಾರ್ವತಿ ಸ್ವರೂಪವಾದ ಹರಿ ಮತ್ತು ಶಿವಸ್ವರೂಪಿ ವೀರಭದ್ರನ ಮೂರ್ತಿಗಳಿವೆ.

Soutadka, Ganesha, South Canara, ದಕ್ಷಿಣ ಕನ್ನಡ, ಸೌತಡ್ಕ, ಗಣಪತಿ.ಸಾಮಾನ್ಯವಾಗಿ ನಾವು ಯಾವುದೇ ದೇವಾಲಯಕ್ಕೆ ಹೋದರೂ, ಭಕ್ತರೊಬ್ಬರ ಕನಸಿನಲ್ಲಿ ಇಲ್ಲ ರಾಜನ ಕನಸಿನಲ್ಲಿ ಬಂದ ದೇವರು ತನಗೊಂದು ಆಲಯ ಕಟ್ಟಿಸಲು ಹೇಳಿದ ಎಂಬ ಕಥೆ ಕೇಳುತ್ತೇವೆ. ಆದರೆ, ಇಲ್ಲಿ ಈ ಗಣಪನಿಗೆ ಗುಡಿ ಕಟ್ಟಿಸಲು ನಿರ್ಧರಿಸಿದ ಬ್ರಾಹ್ಮಣರೊಬ್ಬರ ಕನಸಿನಲ್ಲಿ ದನಗಾಹಿಗಳ ರೂಪದಲ್ಲಿ ಬಂದ ದೇವರು, ತನ್ನನ್ನು ಬಂಧಿಸದಂತೆ ಆದೇಶಿಸಿ ಗುಡಿ ಕಟ್ಟಿಸಬಾರದೆಂದು ಅಪ್ಪಣೆ ಕೊಡಿಸಿದನಂತೆ. ಅಂದಿನಿಂದಲೂ ಇದು ಬಯಲು ಗಣಪ ದೇವಾಲಯವಾಗೇ ಇದೆ. ಆದಾಗ್ಯೂ ವರ್ಷಕ್ಕೊಮ್ಮೆ ಮಾಘ ಶುದ್ಧ ಚೌತಿಯಂದು ನಡೆಯುವ ವಿಶೇಷ ಪೂಜೆಯ ವೇಳೆ ಪೂವಿನಲ್ಲೇ ಗಣಪನಿಗೆ ಗುಡಿ ಕಟ್ಟಿ ಭಕ್ತರು ಆನಂದಿಸುತ್ತಾರೆ.

ದೇವಾಲಯದ ಪಕ್ಕದಲ್ಲಿ ಎಡನೀರು ಶ್ರೀ ಕೇಶವಾನಂದ ಭಾರತೀ ತೀರ್ಥ ಶ್ರೀಪಾದಂಗಳವರು ಉದ್ಘಾಟಿಸಿದ ಶ್ರೀ ಗಣೇಶ ಕಲಾಮಂದಿರ, ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಿದ ಸುಮುಖ ಪ್ರಸಾದ ಭೋಜನ ಶಾಲೆ, ಶಿಶುಮಂದಿರ, ಮನಮುದಗೊಳಿಸುವ ಸುಂದರ ಉದ್ಯಾನವಿದೆ.

ವಿಳಾಸ - ಶ್ರೀ ಸೌತಡ್ಕ ಮಹಾಗಣಪತಿ ಕ್ಷೇತ್ರ, ಕೊಕ್ಕಡ - 574198, ದಕ್ಷಿಣ ಕನ್ನಡ. ದೂರವಾಣಿ - 254351, 254161.

ಮುಖಪುಟ /ನಮ್ಮದೇವಾಲಯಗಳು