ಮುಖಪುಟ /ನಮ್ಮ ದೇವಾಲಯಗಳು  

ವ್ಯಾಸ ವೇದ ಪೀಠ ಶ್ರೀ ಶ್ರೀಧರ ಗುಡ್ಡ

Shivashakti Ganesha, Sri Sridharagudda, ಶ್ರೀಶ್ರೀಧರಗುಡ್ಡ, ಕೆಂಗೇರಿ, ಶಿವಶಕ್ತಿ ಗಣೇಶ* ಟಿ.ಎಂ.ಸತೀಶ್

ಕೆಲವೇ ವರ್ಷಗಳ ಹಿಂದೆ ಕಲ್ಲು ಮುಳ್ಳು, ಕುರುಚಲು ಗಿಡಗಳಿಂದ ಕೂಡಿದ್ದ ಕೆಂಗೇರಿ ಬಳಿಯ ಗುಡ್ಡ ಪ್ರದೇಶ ಇಂದು ಶಾಂತಿ ಸಮೃದ್ಧಿಯ ನೆಲೆವೀಡಾಗಿದೆ. ಶಿವಶಕ್ತಿಗಣಪನ;, ದಕ್ಷಿಣಾಮೂರ್ತಿಯ ನೆಲೆವೀಡಾಗಿ ಶ್ರೀಧರ ಗುಡ್ಡ ಎಂದೇ ಖ್ಯಾತವಾದ ಪವಿತ್ರ ಪುಣ್ಯಕ್ಷೇತ್ರವಾಗಿದೆ.

10 ವರ್ಷಗಳಲ್ಲಿ ಈ ಪವಾಡ ನಡೆದದ್ದು ಓಂಕಾರ ಸ್ವರೂಪಿಣಿ ಪರಮ ಪೂಜ್ಯ ಗುರುಮಾತಾ ಅಮ್ಮ ಅವರ ಸಂಕಲ್ಪಶಕ್ತಿ ಹಾಗೂ ಧೀಶಕ್ತಿಯ ಫಲದಿಂದ. ಸಾಸುವ ಛಲವಿದ್ದರೆ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಸದಾ ಪ್ರತಿಪಾದಿಸುವ ಅಮ್ಮ, ಕಲ್ಲು ಮುಳ್ಳುಗಳಿಂದ ಕೂಡಿದ 5 ಎಕರೆ ಬರಡು ಬಂಜರು ಭೂಮಿಯನ್ನು ಮಠಕ್ಕೆ ಖರೀದಿಸಿ ವ್ಯಾಸವೇದಪೀಠ ತೆರೆಯಲು ತೀರ್ಮಾನಿಸಿರುವುದಾಗಿ ಹೇಳಿದಾಗ ಭಕ್ತರೆಲ್ಲಾ ನಿಬ್ಬೆರಗಾಗಿದ್ದುಂಟು. ಬೆಂಗಳೂರು ನಗರದಿಂದ 10 ಕಿಲೋ ಮೀಟರ್ ದೂರದಲ್ಲಿ, ಜನಸಂಪರ್ಕವೇ ಇಲ್ಲದ ಈ ಜಾಗದಲ್ಲಿ  ಅದೂ ಕಲ್ಲುಮುಳ್ಳಿನ ಬೆಟ್ಟವನ್ನು ನೆಟ್ಟಗೆ ಮಾಡಲು ಸಾಧ್ಯವೇ ಎಂದು ಅನುಮಾನಿಸಿದವರೇ ಹೆಚ್ಚು. ಆದರೆ, ಸಾಲಿಗ್ರಾಮಶಿಲೆಯಲ್ಲಿ ಶಿವಶಕ್ತಿ ಗಣಪನ, ಶ್ರೀಚಕ್ರ ಸ್ಥಾಪಿಸಲು ಇದುವೇ ಪ್ರಶಸ್ತವಾದ ಜಾಗವೆಂದು ಅಮ್ಮ ನಿರ್ಧರಿಸಲು ಈ ಜಾಗದಲ್ಲಿ ನಿಂತಾಗ ಅವರಿಗಾದ ಅಪೂರ್ವ ಅನುಭವವೇ ಕಾರಣ.

ಇನ್ನು ಕೆಲವೇ ವರ್ಷದಲ್ಲಿ ಈ ಸ್ಥಳ ಪ್ರಶಾಂತವಾದ ಪುಣ್ಯಕ್ಷೇತ್ರವಾಗಿ, ನೆಮ್ಮದಿಯ ತಾಣವಾಗುತ್ತದೆ ಎಂದು ಅಮ್ಮ ಅಂದು ಹೇಳುತ್ತಿದ್ದ ಮಾತು ಇಂದು ನಿಜವಾಗಿದೆ.

ಇದೇ ಸ್ಥಳದಲ್ಲಿ ಅಮ್ಮ ಅವರಿಗೆ ಶ್ರೀಆದಿಶಂಕರಾಚಾರ್ಯ ವಿರಚಿತ ಶ್ರೀಸೌಂದರ್ಯಲಹರಿಯನ್ನು ಕನ್ನಡಕ್ಕೆ ಅನುವಾದಿಸುಂತೆಯೂ ಪ್ರೇರಣೆಯಾದ ಫಲವಾಗಿ ಅಮ್ಮ ಸೌಂದರ್ಯ ಲಹರಿಯನ್ನು ಸ್ತ್ರೀಸೊಬಗು ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದು, ಇದೇ ಸ್ಥಳದಲ್ಲಿ ಆ ಎಲ್ಲ ಶ್ಲೋಕಗಳನ್ನೂ ಕನ್ನಡದಲ್ಲಿ ಗ್ರಾನೇಟ್ ಶಿಲೆಯಲ್ಲಿ ಕೆತ್ತಿಸಿ, ಸೌಂದರ್ಯ ಲಹರಿ ಮಂಟಪವನ್ನೇ ನಿರ್ಮಿಸಿದ್ದಾರೆ.

ಈ ಮಂಟಪದ ಎದುರು ಸುಂದರವಾದ ಪಂಚಸಿಂಹಾಸನಿಸ್ಥಿತೆ ರಾಜರಾಜೇಶ್ವರಿಯನ್ನು ಯಂತ್ರರೂಪ ಹಾಗೂ ಮೂರ್ತರೂಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಬರಡು ಭೂಮಿಯಾಗಿದ್ದ ಈ ಸ್ಥಳವೀಗ ಹಚ್ಚ ಹಸುರಿನಿಂದ ನಳನಳಿಸುತ್ತಿದೆ. ಪ್ರಶಾಂತ ನಿರ್ಮಲ ತಾಣವಾಗಿ ಶಾಂತಿ ಬಯಸುವ ಜನರಿಗೆ ಮನಃಸಂತೋಷಗೊಳಿಸುವ, ಅವರ ಮನಸ್ಸನ್ನು ಪ್ರಫುಲ್ಲಗೊಳಿಸುವ ತಾಣವಾಗಿಯೂ ಮಾರ್ಪಟ್ಟಿದೆ.

ಇಲ್ಲಿರುವ ಶಿವಶಕ್ತಿ ಗಣಪನ ಮೂರ್ತಿಯನ್ನು ಸಾಲಿಗ್ರಾಮ ಶಿಲೆಯಲ್ಲಿ ಕಡೆಯಲಾಗಿದ್ದು, ಒಂದೇ ಶಿಲೆಯಲ್ಲಿ ಈಶ್ವರ, ಪಾರ್ವತಿ ಹಾಗೂ ಗಣಪತಿಯನ್ನು ಕೆತ್ತಲಾಗಿದೆ. ಇಂಥ ಒಂದು ಸುಂದರ ಮೂರ್ತಿಯ ಕಲ್ಪನೆ ಅಮ್ಮನವರ ಕನಸಲ್ಲಿ ಕಂಡು ಶಿಲ್ಪಿಯ ಕೈಚಳಕದಲ್ಲಿ ಮೂರ್ತ ರೂಪ ಪಡೆದಿದೆ.

ಈ ಪ್ರಶಾಂತ ಹಾಗೂ ನಿರ್ಮಲ ಪರಿಸರದಲ್ಲಿ ವಟುಗಳಿಗೆ ವೇದಪಾಠ ಹೇಳಿಕೊಡುವ ವ್ಯಾಸವೇದಪೀಠ ಪೀಠವನ್ನೂ ಸ್ಥಾಪಿಸಲಾಗಿದೆ. ಈ ಪೀಠದಲ್ಲಿ  ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಯೋಗದಿಂದ, ಧ್ಯಾನದಿಂದ, ಮೌನವ್ರತದಿಂದ ಆತ್ಮಸಾಕ್ಷಾತ್ಕಾರ ಸಾಧ್ಯ. ಆತ್ಮ ಸಾಕ್ಷಾತ್ಕಾರವಾದಾಗ ದೇಶದ ಅಭಿವೃದ್ಧಿಯೂ ಸಾಧ್ಯ ಎಂದು ಅಮ್ಮ ಪ್ರತಿಪಾದಿಸುತ್ತಾರೆ.

ಮಾರ್ಗ: ಕೆಂಗೇರಿ ಬಸ್‌ನಿಲ್ದಾಣದ ಎದುರು ಇರುವ ರಸ್ತೆಯಲ್ಲಿ  ತುಸು ದೂರ ಸಾಗಿ ಬಲಕ್ಕೆ ತಿರುಗಿದರೆ ಶ್ರೀಧರಗುಡ್ಡಕ್ಕೆ ತಲುಪಬಹುದು. ಮಧ್ಯಾಹ್ನದ ವೇಳೆ ಇಲ್ಲಿ ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆಯೂ ಇದೆ. ಹೆಚ್ಚಿನ ಮಾಹಿತಿಗೆ : 9448054116 ಗೆ ಕರೆ ಮಾಡಬಹುದು.

ಮುಖಪುಟ /ನಮ್ಮ ದೇವಾಲಯಗಳು