ಮುಖಪುಟ /ನಮ್ಮದೇವಾಲಯಗಳು  

ಮಲೆನಾಡ ಮಡಿಲ ಶಾರದೆಯ ನೆಲೆವೀಡು
ಶಂಕರಾಚಾರ್ಯ ಪ್ರತಿಷ್ಠಾಪಿತ ದಿವ್ಯಮಂಗಳಮೂರ್ತಿ

ಶಾರದೆಯ ಕಾಣಲು ಶೃಂಗೇರಿಗೇ ಬರಬೇಕು...

*ಟಿ.ಎಂ. ಸತೀಶ್

Sringeri Sharadha Templeಪಶ್ಚಿಮಘಟ್ಟದ ವರಾಹ ಪರ್ವತದ ಗಂಗಾ ಮೂಲದಲ್ಲಿ ಹುಟ್ಟಿ, ನಿರ್ಮಲವಾಗಿ ಬಳುಕುತ್ತಾ ಶಾಂತವಾಗಿ ಹರಿಯುವ ಪವಿತ್ರ ತುಂಗೆಯ ದಡದಲ್ಲಿ, ಮಲೆನಾಡ ಮಡಿಲಲ್ಲಿ ಮೈದಳೆದು ನಿಂತ ಕ್ಷೇತ್ರವೇ ಶೃಂಗೇರಿ. ಈ ಪುಣ್ಯಕ್ಷೇತ್ರದಲ್ಲಿ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿತವಾದ ವಿದ್ಯಾದೇವತೆ ಶಾರದೆಯ ದಿವ್ಯ ಮಂಗಳ ಮೂರ್ತಿ ಇದೆ. ಶೃಂಗೇರಿಯ ಪ್ರಸ್ತಾಪ ಪುರಾಣಗಳಲ್ಲೂ ಇದೆ. ಶೃಂಗ ಗಿರಿ ಎಂದು ಖ್ಯಾತವಾಗಿದ್ದ ಈ ಕ್ಷೇತ್ರ ಶೃಂಗೇರಿ ಎಂದು ಹೆಸರಾಗಿದೆ. ಐತಿಹ್ಯದ ರೀತ್ಯ ವಿಭಾಂಡಕ ಮಹಾಮುನಿಯ ಪುತ್ರರಾದ ಹಾಗೂ ದಶರಥ ಮಹಾರಾಜನಿಂದ ಪುತ್ರಕಾಮೇಷ್ಠಿಯಾಗ ಮಾಡಿಸಿದ ಋಷ್ಯಶೃಂಗರು ತುಂಗಾ ತೀರದ ಈ ಪವಿತ್ರ ಸ್ಥಳದಲ್ಲಿ ಆಶ್ರಮ ಸ್ಥಾಪಿಸಿ ತಪವನ್ನಾಚರಿಸಿದ್ದರು. ಶೃಂಗ ಅರ್ಥಾತ್ ಕೋಡನ್ನು ಹೊಂದಿದ್ದ ಈ ಮಹಾಮುನಿ ತಪವನಾಚರಿಸಿದ ಪ್ರದೇಶಕ್ಕೆ ಶೃಂಗ ಗಿರಿ ಎಂಬ ಹೆಸರು ಬಂದಿತು. ವಾಸ್ತವವಾಗಿ ಋಷ್ಯಶೃಂಗರು ಶೃಂಗೇರಿಗೆ ಹತ್ತಿರದಲ್ಲಿರುವ ಕಿಗ್ಗ ಎಂಬ ಪ್ರದೇಶದಲ್ಲಿ ಆಶ್ರಮವಾಸಿಗಳಾಗಿದ್ದರು ಎಂದು ಪುರಾಣಗಳು ಸಾರುತ್ತವೆ.

ಆದರೆ, ಇಲ್ಲಿ ಆಗಸದೆತ್ತರಕ್ಕೆ ನಿಂತಿರುವ ಗಿರಿಗಳು ಹಸುವಿನ ಕೋಡಿನಂತೆ (ಶೃಂಗ) ಕಾಣುವ ಕಾರಣ ಈ ಸ್ಥಳ ಶೃಂಗಗಿರಿ ಎಂದು ಕರೆಯಲ್ಪಡುತ್ತಿತ್ತು ಎನ್ನುವುದು ಮತ್ತೊಂದು ವಾದ.

Sringeri Vidyashankara Templeಪ್ರಕೃತಿ ಸಿರಿ: ನಿರ್ಮಲವಾಗಿ ಹಾಗೂ ಶಾಂತವಾಗಿ ಹರಿಯುವ ನದಿ, ತಿಳಿನೀರ ನದಿಯಲ್ಲಿ ನಿರ್ಭಯವಾಗಿ ಈಜಾಡುವ ಸುಂದರವಾದ ದೊಡ್ಡ ಮೀನುಗಳು, ಎಡದಂಡೆಯ ಮೇಲೆ ಎತ್ತರದ ಪ್ರದೇಶದಲ್ಲಿ ದೊಡ್ಡ ರಥದಂತೆ ನಿಂತಿರುವ ಶಿಲ್ಪಶಿಲಾಮಯ ಶ್ರೀವಿದ್ಯಾಶಂಕರ ದೇಗುಲ ಶೃಂಗೇರಿಯ ಮತ್ತೊಂದು ಪ್ರಮುಖ ಆಕರ್ಷಣೆ. ಹೊಯ್ಸಳ, ಚಾಲುಕ್ಯ, ದ್ರಾವಿಡ, ವಿಜಯನಗರ ಶಿಲ್ಪಕಲಾ ಚಾತುರ್ಯದ ಸಂಗಮವಾಗಿರುವ ಈ ದೇವಾಲಯದ ನೋಟ ನಯನ ಮನೋಹರ. ದೇವಾಲಯದ ಒಳಭಾಗ, ಹೊರಭಿತ್ತಿಯಲ್ಲಿ ಸುಂದರವಾದ ಹಾಗೂ ಸೂಕ್ಷ್ಮವಾದ ಕಲಾಕೃತಿಗಳಿದ್ದು, ಇವು ವೈಶಿಷ್ಟ್ಯ ಪೂರ್ಣವಾಗಿವೆ.

ಅತ್ಯಂತ ಸುಂದರವಾದ ಈ ದೇಗುಲದ ನವರಂಗದಲ್ಲಿ ಖಭೌತ ಶಾಸ್ತ್ರಕ್ಕನುಗುಣವಾಗಿ ಮೀನ - ಮೇಷಾದಿಯಾದ ದ್ವಾದಶ ರಾಶಿಗಳ ಸಂಕೇತವುಳ್ಳ ಹನ್ನೆರಡು ಕಂಬಗಳಿವೆ. ಆಯಾಯಾ ಮಾಸದಲ್ಲಿ ಉದಯ ರವಿಯ ಪ್ರಥಮ ಕಿರಣ ಅನುಕ್ರಮವಾಗಿ ಅದೇ ರಾಶಿಯ ಸಂಕೆತಗಳನ್ನೊಳಗೊಂಡ ಕಂಬಗಳ ಮೇಲೆ ಬೀಳುವಂತೆ ನಿರ್ಮಿಸಲಾಗಿದೆ. ಇದು ಭಾರತೀಯರ ವಾಸ್ತುವೈಭವಕ್ಕೆ ಸಾಕ್ಷಿಯಾಗಿದೆ.

Sringeri Sharadheಪಕ್ಕದಲ್ಲೇ ಸುಂದರವಾದ ಬೃಹತ್ ಭವ್ಯ ಶಾರದೆಯ ದೇವಾಲಯವಿದೆ. ದ್ರಾವಿಡ ಶೈಲಿಯ ರಾಜಗೋಪುರ ಹಾಗೂ ಪ್ರವೇಶದ್ವಾರ ದಾಟುತ್ತಿದ್ದಂತೆಯೇ ತಾಯಿ ಶಾರದೆಯ ದರ್ಶನವಾಗುತ್ತದೆ. ಕೃಷ್ಣವರ್ಣದ ಶಿಲೆಯಿಂದ ನಿರ್ಮಿಸಿರುವ ಗರ್ಭಗೃಹದ ಸುತ್ತ ವಿಶಾಲವಾದ ಪ್ರದಕ್ಷಣಾಪಥವಿದೆ. ಈ ಆವರಣದಲ್ಲಿರುವ ಶಿಲಾಸ್ತಂಭಗಳು ನಯನಮನೋಹರವಾದ ಕೆತ್ತನೆಗಳಿಂದ ಕೂಡಿವೆ. ಪ್ರಧಾನಗರ್ಭಗೃಹದಲ್ಲಿರುವ ಪ್ರಸನ್ನವದನೆಯಾದ ತಾಯಿ ಶಾರದೆಯ ಕಣ್ಣುಗಳಲ್ಲಿರುವ ಕಾಂತಿ ಭಕ್ತರಲ್ಲಿ ನವಚೈತನ್ಯವನ್ನೇ ಮೂಡಿಸುತ್ತದೆ.

ದೇವಾಲಯದ ಬಳಿ ನದಿಗೆ ಅಡ್ಡಲಾಗಿ ನಿರ್ಮಿಸಲಿಗಿರುವ ತೂಗು ಸೇತುವೆ ದಾಟಿ ಸಾಗಿದರೆ,  ತುಂಗಾನದಿಯ ಬಲದಂಡೆಯ ಮೇಲೆ ನರಸಿಂಹ ವನದಲ್ಲಿ ಶೃಂಗೇರಿ ಜಗದ್ಗುರುಗಳ ಮಠವಿದೆ.  ಶೃಂಗೇರಿ ಶಾರದೆ, ಶಕ್ತಿಗಣಪ, ಆಚಾರ್ಯ ಶಂಕರ ಆಲಯ, ವಿದ್ಯಾಶಂಕರ ದೇವಾಲಯ, ಕಪ್ಪೆಶಂಕರ, ನರಸಿಂಹವನ, ಚತುರ್ವಿದ್ಯೇಶ್ವರ ಮೂರ್ತಿ, ಹರಿಹರೇಶ್ವರ ದೇವಾಲಯ, ಮಲಹಾನಿಕರೇಶ್ವರ ದೇವಸ್ಥಾನ, ರಕ್ಷಕ ದೇವತಾ ಆಲಯ, ಕಾಲಭೈರವೇಶ್ವರ, ಆಂಜನೇಯ, ದುರ್ಗಾಂಬಾ, ಕಾಳಿಕಾಂಬಾ ಮತ್ತು ರತ್ನಗರ್ಭ ಗಣಪ ಶೃಂಗೇರಿಯಲ್ಲಿ ನೋಡಲೇಬೇಕಾದ ಪವಿತ್ರ ತಾಣಗಳು.

ಕಪ್ಪೆ ಶಂಕರನ ಬಗ್ಗೆ ಒಂದು ಕಥೆಯಿದೆ. ಶೃಂಗೇರಿಯಲ್ಲಿ ಆದಿ ಶಂಕರಾಚಾರ್ಯರು ತಾಯಿ ಶಾರದೆಯನ್ನು ಪ್ರತಿಷ್ಠಾಪಿಸಲು ಕಾರಣ ಈ ಕಥೆಯಲ್ಲಡಗಿದೆ. ಒಮ್ಮೆ ತುಂಗೆಯ ತಟಕ್ಕೆ ಶಂಕರಾಚಾರ್ಯರು ಬಂದಾಗ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತಂತೆ. ಆ ಸಂದರ್ಭದಲ್ಲಿ ಹಾವೊಂದು ಹೆಡೆ ಬಿಚ್ಚಿ ಕಪ್ಪೆಯೊಂದಕ್ಕೆ ರಕ್ಷಣೆ ನೀಡುತ್ತಿತ್ತಂತೆ. ಶತ್ರುಗಳು ಮಿತ್ರರಾಗಿ ಸಹಕಾರಕ್ಕೆ ನಿಂತ ಈ ಸ್ಥಳದಲ್ಲಿ ಅಭೂತಪೂರ್ವವಾದ ಶಕ್ತಿ ಇದೆ ಎಂಬುದನ್ನು ಮನಗಂಡ ಆಚಾರ್ಯರು ಈ ಪ್ರದೇಶವನ್ನು ಪವಿತ್ರ ಪುಣ್ಯ ಕ್ಷೇತ್ರ ಮಾಡಿದರೆಂದು ಹೇಳಲಾಗುತ್ತದೆ.

sringeri temple gopuram, ಶೃಂಗೇರಿ ದೇವಾಲಯ, ಗೋಪುರ, ದಕ್ಷಿಣಾಮ್ನೇಯ, ಕನ್ನಡರತ್ನ.ಕಾಂ., ಸತೀಶ್ ತುರುವೇಕೆರೆ, ಟಿ.ಎಂ. ಸತೀಶ್ನರಸಿಂಹ ಪರ್ವತ, ಕನ್ನಡ ರಾಜ ರಾಜೇಶ್ವರಿ ಭುವನೇಶ್ವರಿ, ಆದಿ ಶಂಕರಾಚಾರ್ಯ ವಿಗ್ರಹಗಳು, ಕಿಗ್ಗದ ಶ್ರೀ ಋಷ್ಯಶೃಂಗೇಶ್ವರ ದೇವಾಲಯಗಳೂ ಈ ಕ್ಷೇತ್ರದ ಪಾವಿತ್ರ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ನವರಾತ್ರಿಯ ವೇಳೆ ತಾಯಿ ಶಾರದೆಗೆ ನಿತ್ಯವೂ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ. ದಸರೆಯ ವೇಳೆ ಶಂಕರಮಠದ ಪೀಠಾಚಾರ್ಯರು ವ್ಯಾಖ್ಯಾನ ಧರ್ಮ ಸಿಂಹಾಸನವನ್ನೇರಿ, ಪಟ್ಟೆ ಪೀತಾಂಬರ ತೊಟ್ಟು, ಕರೀಟ ಧರಿಸಿ ದರ್ಬಾರು ನಡೆಸುವ ಪದ್ಧತಿಯೂ ಇದೆ.

ಯಾತ್ರಿಕರಿಗಾಗಿಯೇ ಶ್ರೀಮಠದ ಮುಖ್ಯದ್ವಾರದ ಎಡಗಡೆ ಶ್ರೀಮಠಕ್ಕೆ ಹೊಂದಿಕೊಂಡಂತೆ ಶ್ರೀಶಂಕರ ನಿಕೇತನ, ಅದರ ಎದುರು ಅತಿಥಿಗೃಹ ಮತ್ತು ತಿರುಪತಿ ದೇವಸ್ಥಾನದವರು ನಿರ್ಮಿಸಿರುವ ವಸತಿಗೃಹಗಳೂ ಇವೆ. ಶಂಕರಕೃಪಾ, ಭಾರತೀ ವಿಹಾರವೇ ಮುಂತಾದ ವಸತಿ ಗೃಹಗಳೂ ಇವೆ.

ಎಲ್ಲ ಯಾತ್ರಿಕರಿಗೂ ಶ್ರೀಮಠದಲ್ಲಿ ಮಧ್ಯಾಹ್ನ ಭೋಜನದ ವ್ಯವಸ್ಥೆಯೂ ಇದೆ. ಮಠದ ದೇವಾಲಯಗಳು ಬೆಳಗ್ಗೆ 6ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಾಯಂಕಾಲ 5ರಿಂದ 9ರವರೆಗೆ ತೆರೆದಿರುತ್ತವೆ. ಪವಿತ್ರ ಪುಣ್ಯಕ್ಷೇತ್ರವಾಗಿ, ಯಾತ್ರಾಸ್ಥಳವಾಗಿ, ಶಿಲ್ಪಕಲೆಯ ತವರಾಗಿ, ನಿಸರ್ಗಪ್ರಿಯರ ಕಣ್ಮನ ತಣಿಸುವ ತಾಣವಾಗಿ, ಇತಿಹಾಸ, ಪುರಾತತ್ವ ಸಂಶೋಧಕರಿಗೆ ಆಕರವಾಗಿ, ಕಲಾವಿದರಿಗೆ ಸ್ಫೂರ್ತಿಯಾಗಿರುವ ಶೃಂಗೇರಿ ರಾಮಾಯಣ ಕಾಲದಿಂದಲೂ ಪ್ರಸಿದ್ಧಿ ಪಡೆದಿದೆ.

Shankaracharyaಶೃಂಗೇರಿ ಋಷಿ ಮುನಿಗಳ ತಪೋ ಭೂಮಿಯಾಗಿತ್ತು ಎಂಬುದಕ್ಕೆ ನೂರಾರು ಪ್ರಕರಣಗಳು ಪುಷ್ಟಿ ನೀಡುತ್ತವೆ. ಸುಮಾರು 1200 ವರ್ಷಗಳ ಹಿಂದೆ ಸಾತ್ವಿಕ ಧರ್ಮ ಕ್ಷೀಣವಾಗಿ, ವಾಮಾಚಾರ ಕ್ಷುದ್ರೋಪಾಸನೆ ತಾಂಡವವಾಡುತ್ತಿದ್ದ ಕಾಲದಲ್ಲಿ ಕ್ರಿ.ಶ. 788ರಲ್ಲಿ ಜನಿಸಿದ ಶಂಕರ ಭಗವತ್ಪಾದರು ಅದ್ವೈತ ಧರ್ಮ ಪ್ರತಿಪಾದನೆ ಮಾಡಿ ಸಾತ್ವಿಕ ಧರ್ಮವನ್ನು ನೆಲೆಗೊಳಿಸಲು ಆಸೇತು ಹಿಮಾಚಲ ಪರ್ಯಂತ ಸಂಚರಿಸಿದಾಗ, ವೈದಿಕ ಧರ್ಮವನ್ನು ಪುನರ್ ಸ್ಥಾಪಿಸಲು ನಾಲ್ಕು ಆಮ್ನಾಯ ಧರ್ಮಪೀಠಗಳನ್ನು ಸ್ಥಾಪಿಸಿದರು. ಇದರಲ್ಲಿ ಮೊದಲನೆಯದೇ ಶೃಂಗೇರಿಯ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ. ಕಾಶ್ಮೀರ ಪುರವಾಸಿನಿಯೂ ವಿದ್ಯಾದೇವತೆಯೂ ಆದ ಬ್ರಹ್ಮಸತಿ ತಾಯಿ ಶಾರದೆಯನ್ನು ಶಂಕರ ಭಗವತ್ಪಾದರು ಈ ಪೀಠದಲ್ಲಿ ಪ್ರತಿಷ್ಠಾಪಿಸಿದರು.

ಈ ಧರ್ಮಪೀಠದ ಹತ್ತನೇ ಆಚಾರ್ಯರಾಗಿದ್ದ ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯರಾದ ವಿದ್ಯಾರಣ್ಯರು ಶ್ರೀಮಠಕ್ಕೆ ಹೊಸ ಆಯಾಮವನ್ನೇ ನೀಡಿದರು. ಹಕ್ಕ ಬುಕ್ಕರೆಂಬ ತರುಣ ಯೋಧರಿಂದ ಕರ್ನಾಟಕದ ಹೆಮ್ಮೆಯ ವಿಜಯನಗರ ಸಂಸ್ಥಾನ ಸ್ಥಾಪನೆಯ ಕಾರಣೀಭೂತರಾದ ವಿದ್ಯಾರಣ್ಯರು, ವೇದೋಪನಿಷತ್ತುಗಳಿಗೆ ಭಾಷ್ಯ ಬರೆದು, ಧರ್ಮ Sirimane Fallsಪ್ರಚಾರ ಮಾಡುವ ಮೂಲಕ ವೈದಿಕ ಧರ್ಮದ ಪುನರ್ ಸ್ಥಾಪನೆಗೆ ಮಾಡಿದ ಕಾರ್ಯ ಅದಮ್ಯ. ಎತ್ತರವಾದ ಬೆಟ್ಟಗಳು, ಎತ್ತ ನೋಡಿದರೂ ಕಣ್ಣಿಗೆ ತಂಪೀಯುವ ಹಸಿರು, ಮುಗಿಲೆತ್ತರ ಬೆಳೆದ ವೃಕ್ಷಸಿರಿ, ಎತ್ತರದ ಗಿರಿಗಳಿಂದ ಮೈತುಂಬಿ ಧುಮ್ಮಿಕ್ಕುವ ಹಲವಾರು ಜಲಪಾತ ನೋಡುಗರ ಕಣ್ಮನ ಸೆಳೆಯುತ್ತವೆ. ಸಿರಿಮನೆಯ ಜಲಪಾತವಂತೂ ನಯನ ಮನೋಹರ. ಶೃಂಗೇರಿಗೆ ಹೋದವರು ಈ ಜಲಾಪಾತ ವೀಕ್ಷಣೆಗೆ ಹೋಗೇ ಹೋಗುತ್ತಾರೆ. ಮಳೆಗಾಲದಲ್ಲಿ ಸಿರಿಮನೆಯ ಜಲಧಾರೆಯ ನೋಟ ವರ್ಣಿಸಲಸದಳ.

ಜಿಲ್ಲಾಕೇಂದ್ರ ಚಿಕ್ಕಮಗಳೂರಿನಿಂದ ಶೃಂಗೇರಿಗೆ 90 ಕಿಲೋ ಮೀಟರ್ ದೂರವಾದರೆ, ಬೆಂಗಳೂರಿನಿಂದ 337 ಕಿಲೋ ಮೀಟರ್.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು

M.V.Shankaranarayan

Our temples.in Advt