ಮುಖಪುಟ /ನಮ್ಮದೇವಾಲಯಗಳು 

 ವಿದ್ಯಾಕೇಂದ್ರ ಸುತ್ತೂರು

*ಟಿ.ಎಂ.ಸತೀಶ್

kannadaratna.com, suttur mutt temple, ಸುತ್ತೂರು ಮಠದ ದೇವಾಲಯ, ಸುತ್ತೂರು.ನಂಜನಗೂಡಿನಿಂದ 15 ಕಿಲೋ ಮೀಟರ್ ದೂರದಲ್ಲಿರುವ ಕ್ಷೇತ್ರ ಸುತ್ತೂರು. ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮಿಗಳ ದೂರದರ್ಶಿತ್ವದ ಫಲವಾಗಿ ಸುತ್ತೂರು ವಿಶ್ವಾದ್ಯಂತ ಖ್ಯಾತಿ ಪಡೆದಿದೆ. ಸುತ್ತೂರು ಸಂಸ್ಥಾನ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅನುಪಮ. ರಾಷ್ಟ್ರಾದ್ಯಂತ ಸುತ್ತೂರು ಮಠದ ಶಿಕ್ಷಣ ಸಂಸ್ಥೆಗಳಿವೆ.

ಸುತ್ತೂರು ಮಠವಿರುವ ಭೂಮಿ ಪರಮ ಪವಿತ್ರವೂ, ಶಕ್ತಿಯುತವೂ ಆಗಿದೆ.  ಹಿಂದೆ ಈ ಊರಿಗೆ ಶ್ರೋತ್ರಿಯೂರು ಎಂಬ ಹೆಸರಿತ್ತು ಎಂದು ಚೋಳರ ಶಾಸನ ಸಾರುತ್ತದೆ. ವಿಜಯನಗರದರಸರ ಕಾಲದಲ್ಲೇ ಈ ಊರು ಸುತ್ತೂರು ಆಗಿತ್ತು ಎಂಬದಕ್ಕೆ ದಾಖಲೆಗಳಿವೆ.

ಹೊಯ್ಸಳರ ಕಾಲದಲ್ಲಿ ಇಲ್ಲಿ ನಾರಾಯಣ ದೇವಾಲಯ ನಿರ್ಮಿಸಲಾಗಿದೆ. ಸುಂದರ ವಾಸ್ತು ವಿನ್ಯಾಸದ ಈ ದೇವಾಲಯದ ಗರ್ಭಗೃಹದಲ್ಲಿ ಮೂರೂವರೆ ಅಡಿ ಎತ್ತರದ ನಾಗಕೇಶವ ಅಥವಾ ನಾರಾಯಣಸ್ವಾಮಿ ವಿಗ್ರಹವಿದೆ. ಈ ದೇಗುಲವನ್ನು 1169ರಲ್ಲಿ ದಂಡನಾಯಕ ಲಕ್ಷ್ಮಯ್ಯ ಕಟ್ಟಿಸಿದ ಎಂದು ಶಾಸನದಿಂದ ತಿಳಿದುಬರುತ್ತದೆ.

ಹೊಯ್ಸಳರ ಒಂದನೆ ನರಸಿಂಹನ ದಂಡನಾಯಕನಾಗಿದ್ದ ಲಕ್ಷ್ಮಯ್ಯ 1169ರಲ್ಲಿ ಸುತ್ತೂರನ್ನು ತನ್ನ ಆಡಳಿತ ಕೇಂದ್ರ ಮಾಡಿಕೊಂಡಿದ್ದ. ಆತನೆ ಇಲ್ಲಿ ಮತ್ತೊಂದು ಸುಂದರವಾದ ಸೋಮೇಶ್ವರ ದೇವಾಲಯ ಕಟ್ಟಿಸಿದ ಎಂದು ತಿಳಿದುಬರುತ್ತದೆ.

ದ್ರಾವಿಡ ಶೈಲಿಯಲ್ಲಿರುವ ದೇವಾಲಯದ ಗರ್ಭಗುಡಿಗಳಲ್ಲಿ ಲಿಂಗ ಹಾಗೂ ಹರಿಹರೇಶ್ವರ ಮೂರ್ತಿಗಳಿವೆ.  ಹರಿಹರೇಶ್ವರ ವಿಗ್ರಹ ಮನಮೋಹಕವಾಗಿದೆ. ಈ ವಿಗ್ರಹದ ಬಲಭಾಗದಲ್ಲಿ ಪಾರ್ವತಿ ಹಾಗೂ ಎಡಭಾಗದಲ್ಲಿ  ಲಕ್ಷ್ಮಿಯ ವಿಗ್ರಹಗಳಿವೆ. ಹರಿಹರ ಮೂರ್ತಿ ಇರುವ ಆಧಾರಪೀಠದ ಮೇಲೆ ಹರಿಹರಹ ವಾಹನಗಳಾದ ಗರುಡ ಮತ್ತು ನಂದಿಯನ್ನು ಶಿಲ್ಪಿ ಕಡೆದಿದ್ದಾನೆ.

ಬಹು ಪ್ರಾಚೀನವಾದ ಸುತ್ತೂರು ಮಠದಲ್ಲಿ ಶಿವರಾತ್ರಿ ಸ್ವಾಮಿಗಳ ಮತ್ತು ಇತರ ಸಂತರ ಗದ್ದುಗೆಗಳಿವೆ. ಸುತ್ತೂರು ಮಠದ ವತಿಯಿಂದ ಇಲ್ಲಿರುವ ಸೋಮೇಶ್ವರ ದೇವಾಲಯ ಹಾಗೂ ವೀರೇಶ್ವರ ದೇವಾಲಯ ಜೀರ್ಣೋದ್ಧಾರ ಮಾಡಲಾಗಿದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು