ಮುಖಪುಟ /ನಮ್ಮ ದೇವಾಲಯಗಳು  

ತ್ರಿವೇಣಿ ಸಂಗಮದ ಟಿ. ನರಸೀಪುರ
ಅಗಸ್ತ್ತ್ಯೆಶ್ವರನಿರುವ ಮಹಿಮಾನ್ವಿತ ಕ್ಷೇತ್ರ....

*ಟಿ.ಎಂ. ಸತೀಶ್

 T.Narasipura Temple, Kannadaratna.com, ourtemples.in our temples, karnataka temples, temples of karnatakaತಿರಮಕೂಡಲು ನರಸೀಪುರ ಎಂದರೆ ಬಹಳ ಜನರಿಗೆ ಗೊತ್ತಾಗುವುದೇ ಇಲ್ಲ. ಅದೇ ಟಿ. ನರಸೀಪುರ ಎಂದರೆ ಓ. ಗೊತ್ತು ಎನ್ನುತ್ತಾರೆ. ಅರಮನೆಗಳ ನಗರಿ ಮೈಸೂರಿಗೆ ಕೇವಲ 32 ಕಿಲೋ ಮೀಟರ್ ದೂರದಲ್ಲಿರುವ ತಿರುಮಕೂಡಲು ನರಸೀಪುರ ಪವಿತ್ರ ಪುಣ್ಯಕ್ಷೇತ್ರ.

ಈ ಪವಿತ್ರ ಸ್ಥಳದಲ್ಲಿ ಜೀವನದಿ ಕಾವೇರಿ, ಕಪಿಲೆಯ ಸ್ಫಟಿಕ ಸರೋವರದಲ್ಲಿ ಸಂಗಮವಾಗುತ್ತವೆ. ಈ ಮೂರರ ಸಂಗಮ ಸ್ಥಳವಾದ್ದರಿದಲೇ ಇದಕ್ಕೆ ತಿರುಮ ಕೂಡಲು ಎಂದು ಹೆಸರು ಬಂದಿದೆ ಎನ್ನುತ್ತಾರೆ ಊರಿನ ಹಿರೀಕರು. ಗುಂಜ ನರಸಿಂಹಸ್ವಾಮಿ ನೆಲೆಸಿಹ ತಾಣವಿದಾದ್ದರಿಂದ ಇದು ತಿರುಮಕೂಡಲು ನರಸೀಪುರ ಎನಿಸಿದೆ. ಹಿಂದೆ ಈ ಊರು ತ್ರಿಮಕೂಟ ಎಂದು ಹೆಸರಾಗಿದ್ದ ಬಗ್ಗೆ ದಾಖಲೆಗಳಿವೆ.

ಸಂಗಮದ ಸಮೀಪದಲ್ಲಿ ಅಗಸ್ತ್ಯೇಶ್ವರನ ದೇಗುಲವಿದೆ. 16ನೇ ಶತಮಾನಕ್ಕೂ ಮೊದಲು (11ನೇ ಶತಮಾನದಲ್ಲಿ ದಳವಾಯಿ ಲಿಂಗಣ್ಣ) ಕಟ್ಟಿರುವರೆನ್ನಲಾದ ಪುರಾತನವಾದ ಈ ಅಗಸ್ತ್ಯೇಶ್ವರ ದೇವಾಲಯದ ಗರ್ಭಗೃಹದಲ್ಲಿರುವ ಲಿಂಗದ ಶಿಖರದಲ್ಲಿ ರಂಧ್ರವಿದ್ದು ಅದರಿಂದ ಕಾರಂಜಿಯ ತೀರ್ಥ ಬರುತ್ತದೆ. ಲಿಂಗದಲ್ಲಿ ತೀರ್ಥೋದ್ಭವ ಆಗಿದ್ದಾದರೂ ಹೇಗೆ? ಸ್ಥಳ ಪುರಾಣದ ರೀತ್ಯ ಇದಕ್ಕೂ ಒಂದು ಕಥೆ ಇದೆ. ಅಗಸ್ತ್ಯ ಮಹರ್ಷಿಗಳು ಈ ಪುಣ್ಯಕ್ಷೇತ್ರದಲ್ಲಿ ನೆಲೆಸಿದ್ದ ಸಂದರ್ಭದಲ್ಲಿ ಶಿವಪೂಜೆ ಮಾಡಲು, T.Narasipura Temple, Kannadaratna.com, ourtemples.in our temples, karnataka temples, temples of karnatakaಲಿಂಗವೊಂದನ್ನು ತರುವಂತೆ ಹನುಮಂತನನ್ನು ಕೋರಿದರಂತೆ. ಉತ್ತಮವಾದ ಲಿಂಗ ಹುಡುಕುತ್ತಾ ಆಂಜನೇಯ ಸಮಯ ವ್ಯರ್ಥ ಮಾಡಿದ. ಮುಹೂರ್ತ ಮೀರಿ ಹೋಗಬಾರದೆಂದು ಅಗಸ್ತ್ಯ ಮಹರ್ಷಿಗಳು ನದಿ ತೀರದಲ್ಲಿ ಇದ್ದ ಮರಳಿನಲ್ಲಿ ಲಿಂಗ ಮಾಡಿ ಸೈಕತ ಲಿಂಗ ಪೂಜಿಸಿದರು. ಅಷ್ಟು ಹೊತ್ತಿಗೆ ಲಿಂಗದೊಂದಿಗೆ ಹನುಮ ಬಂದ. ತಾನು ತಂದಿರುವ ಲಿಂಗವನ್ನೇ ಪೂಜಿಸುವಂತೆ ಹೇಳಿದ. ಅಗಸ್ತ್ಯರು ಈಗಾಗಲೇ ಲಿಂಗ ಪ್ರತಿಷ್ಠಾಪಿಸಿ ಪೂಜಿಸಿದ್ದಾಗಿದೆ ಎಂದಾಗ,  ಕೋಪಗೊಂಡ ಹನುಮ ಮುಷ್ಠಿಯಿಂದ ಮರಳ ಲಿಂಗಕ್ಕೆ ಗುದ್ದಿದ, ಲಿಂಗ ಭಿನ್ನವಾಯ್ತು. ಅಲ್ಲಿ ಗಂಗಾವತರಣವೂ ಆಯ್ತು. ಇಲ್ಲಿ ಲಿಂಗದ ನೀರನ್ನೇ ತೀರ್ಥವಾಗಿ ಭಕ್ತರಿಗೆ ಕೊಡುತ್ತಾರೆ.

ಹೀಗೆ ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪಿಸಿದ ಲಿಂಗ ಅಗಸ್ತ್ಯೇಶ್ವರ ಎನಿಸಿಕೊಂಡಿದೆ ಎಂದೂ ಹೇಳುತ್ತಾರೆ ಪುರೋಹಿತರು. ಈ ಪವಿತ್ರ ಕ್ಷೇತ್ರದಲ್ಲಿ ಹನುಮಂತ ತಂದ ಲಿಂಗವನ್ನೂ ಪ್ರತಿಷ್ಠಾಪಿಸಲಾಗಿದ್ದು, ಇದಕ್ಕೆ ಹನುಮಂತೇಶ್ವರ ಎಂದೇ ಹೆಸರು ಬಂದಿದೆ. ಈ ದೇಗುಲ ವಿಶಾಲವಾದ ಪ್ರಾಕಾರ ಹೊಂದಿದ್ದು ಪೂರ್ಣ ಮಂಗಳ ಕಾಮಾಕ್ಷಿ ಅಮ್ಮನವರ ಗುಡಿಯಿದೆ. ಗುಡಿಯ ಭಿತ್ತಿಯಲ್ಲಿ ಹಲ್ಲಿಯ ಉಬ್ಬುಶಿಲ್ಪವಿದೆ. ನವರಂಗದಲ್ಲಿರುವ ಸುಬ್ರಹ್ಮಣ್ಯ, ಸೂರ್ಯ, ಗಣೇಶ, ಪ್ರಾಕಾರದಲ್ಲಿರುವ  2 ಅಡಿ ಎತ್ತರದ, ಅಷ್ಟಬಾಹುಗಳುಳ್ಳ ನರ್ತಿಸುತ್ತಿರುವ ಅಶ್ವತ್ಥನಾರಾಯಣ, ಟಗರಿನ ತಲೆ ಮತ್ತು ನಾಲ್ಕು ಬಾಹುಗಳುಳ್ಳ ದಕ್ಷ, ಆಲದ ಮರದ ಅಡಿಯಲ್ಲಿ ಸಪ್ತರ್ಷಿಗಳ ಶಿಲ್ಪಗಳಿರುವ ಪೀಠದ ಮೇಲೆ ಕುಳಿತು ಧ್ಯಾನಮಗ್ನನಾದ ದಕ್ಷಿಣಾಮೂರ್ತಿ ಮನೋಹರವಾಗಿದೆ. ಕಪಿಲೆ ಮತ್ತು ಕಾವೇರಿಯರ ಸಂಗಮದ ಆಚೆಯ ದಡದಲ್ಲಿ ನರಸಿಂಹನ ಸ್ವಾಮಿ ದೇವಸ್ಥಾನವಿದೆ. ನರಸಿಂಹ ದೇವರು ಕೈಯಲ್ಲಿ ಗುಲಗಂಜಿಯ ಹಿಡಿದಿರುವುದರಿಂದ ಗುಂಜಾ ನರಸಿಂಹ ಎಂದೂ ಕರೆಯುತ್ತಾರೆ. ಪಿಟೀಲು ವಿದ್ವಾಂಸರಾದ ವಿದ್ವಾನ್ ಪಿಟೀಲು ಚೌಡಯ್ಯನವರು ಹುಟ್ಟಿದ್ದು ಈ ಊರಿನಲ್ಲೇ.

T.Narasipura Temple Yaksini with Violin type of Instrumentಅಗಸ್ತ್ಯೇಶ್ವರ ಗುಡಿಯ ಬಳಿಯ ಕಂಬದಲ್ಲಿ ಪಿಟೀಲಿನ ಆಕಾರದ ವಾದ್ಯ -(ದನುರ್ ವೀಣಾ) ನುಡಿಸುವ ಯಕ್ಷಿಣಿಯ ಉಬ್ಬು ಶಿಲ್ಪವಿದ್ದು, ಪಿಟೀಲು ಪಾಶ್ಚಿಮಾತ್ಯ ವಾದ್ಯವಲ್ಲ, ಭಾರತೀಯ ವಾದ್ಯ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಪಿಟೀಲು ಚೌಡಯ್ಯ ಅವರು ಪ್ರತಿಪಾದಿಸಿದ್ದರು.

ಕ್ಷೇತ್ರದಲ್ಲಿ ಸೋಸಲೆ ಮಠಕ್ಕೆ ಸೇರಿದ ಚಂದ್ರಿಕಾರಾಯರ ಬೃಂದಾವನವಿದೆ. ನದಿ ತೀರದಲ್ಲಿ ಬೃಹತ್ ಅಶ್ವತ್ಥ ವೃಕ್ಷವಿದ್ದು, ಕೆಳಗೆ ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದೆ. 12 ವರ್ಷಗಳಿಗೊಮ್ಮೆ ಇಲ್ಲಿ ಕುಂಭಮೇಳ ನಡೆಯುತ್ತದೆ. ದೇಶದ ಮೂಲೆ ಮೂಲೆಗಳಿಂದ ಭಕ್ತರು ಇಲ್ಲಿಗೆ ಆಗಮಿಸಿ ಪವಿತ್ರ ಸ್ನಾನ ಮಾಡುತ್ತಾರೆ. ಪ್ರತಿ ವರ್ಷ ಇಲ್ಲಿರುವ ಚೌಡೇಶ್ವರಿ ದೇವಿಗೆ ಹರಕೆ ಹೊತ್ತ ಭಕ್ತರು  ಕೊಂಡ ಹಾಯುತ್ತಾರೆ. ಮಂಟೆ ಲಿಂಗಸ್ವಾಮಿ ದೇವಾಲಯವೂ ಇಲ್ಲಿದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯ