ಮುಖಪುಟ /ನಮ್ಮ ದೇವಾಲಯಗಳು

ತುರುವೇಕೆರೆಯ ಬೇಟೇರಾಯಸ್ವಾಮಿ

Beterayaswamy temple, ಬೇಟೇರಾಯಸ್ವಾಮಿ ದೇವಾಲಯ, ತುರುವೇಕೆರೆ. *ಟಿ.ಎಂ.ಸತೀಶ್

ತುಮಕೂರು ಜಿಲ್ಲೆಯ ಪ್ರಮುಖ ತಾಲೂಕು ತುರುವೇಕೆರೆಯಲ್ಲಿರುವ ಪ್ರಸಿದ್ಧ ದೇವಾಲಯ ಬೇಟೇರಾಯಸ್ವಾಮಿಯದು. ಪ್ರಚೀನವಾದ ಈ ದೇವಾಲಯದಲ್ಲಿ ವರದ ಬೇಟೇರಾಯಸ್ವಾಮಿಯ ಮನಮೋಹಕ ವಿಗ್ರಹವಿದೆ. ಇತ್ತೀಚೆಗೆ ವರದ ಬೇಟೇರಾಯನ ದೇಗುಲದ ಜೀರ್ಣೋದ್ಧಾರವೂ ನೆರವೇರಿದ್ದು, ಸುಂದರವಾದ ರಾಜಗೋಪುರ ನಿರ್ಮಾಣ ಮಾಡಲಾಗಿದೆ. ಸರಕಾರದ ನೆರವಿಲ್ಲದೆಯೇ ನಾಗರಿಕರೆ ಹಣ ಸಂಗ್ರಹಿಸಿ ರಾಜಗೋಪುರ ನಿರ್ಮಾಣ ಮಾಡಿ, ಕುಸಿಯುತ್ತಿದ್ದ ಗೋಡೆಗಳನ್ನು ಬಲಗೊಳಿಸಿದ್ದಾರೆ.

ಬೇಟೆರಾಯನ ದೇವಾಲಯ ಪೂರ್ವಾಭಿಮುಖವಾಗಿದೆ.  ಮುಖ್ಯ ಪ್ರವೇಶ ಮಹಾದ್ವಾರದ ಎಡಬದಿಯಲ್ಲಿ ವಿಘ್ನನಿವಾರಕನಾದ ಗಣಪತಿಯ ಗೂಡಿದೆ. ಒಳಪ್ರವೇಶಿಸುತ್ತಿದ್ದಂತೆ ಪ್ರಾಚೀನ ದೇವಾಲಯಗಳಲ್ಲಿರುವಂತೆ  ವಿಶಾಲವಾದ ಜಗಲಿ ಮಂಟಪ, ಪ್ರಾಕಾರ,  ಸುಕನಾಸಿ, ನವರಂಗ, ಹಜಾರ ಹಾಗೂ ಗರ್ಭಗುಡಿಗಳಿವೆ. ದೇವಾಲಯದ ಬಿತ್ತಿಗಳಲ್ಲಿ ಹಾಗೂ ಕಂಬಗಳಲ್ಲಿ ಸೂಕ್ಷ್ಮ ಕೆತ್ತನೆಗಳು ಇಲ್ಲದಿದ್ದರೂ ಗಮನ ಸೆಳೆಯುವಂಥ ಕೆಲವು ಶಿಲ್ಪಗಳಿವೆ. ದೇವಾಲಯದ ಆವರಣದಲ್ಲಿ ಬೃಹತ್ ಪಾಕಶಾಲೆಯೂ ಇದೆ.

Beterayaswamy temple, Turuvekereದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿರುವ ಈ ದೇವಾಲಯದಲ್ಲಿ ಮಹಾಲಕ್ಷ್ಮೀಯ ಪ್ರತ್ಯೇಕ ದೇವಾಲಯವೂ ಇದೆ. ಮುಂಭಾಗದಲ್ಲಿ ಮಂಟಪವೂ ಇದೆ. ಪ್ರಧಾನ ಗರ್ಭಗುಡಿಯಲ್ಲಿರುವ ನಾಲ್ಕು ಅಡಿ ಎತ್ತರದ ಅತ್ಯಂತ ಸುಂದರ ಹಾಗೂ ಮನೋಹರವಾದ ಸೂಕ್ಷ್ಮ ಕೆತ್ತನೆಗಳಿಂದ ಹಾಗೂ ಕಲಾ ನೈಪುಣ್ಯದಿಂದ ಕೂಡಿದ ವರದ ಬೇಟೇರಾಯಸ್ವಾಮಿ ವಿಗ್ರಹವಿದೆ. ಬೇಟೇರಾಯಸ್ವಾಮಿಯ ಕೈಗಳಲ್ಲಿ ಕಲ್ಲಿನ ಬಳೆಗಳಿದ್ದು ಇದು ವರ್ತುಲಾಕಾರವಾಗಿ ಸುತ್ತುತ್ತದೆ. ಏಕಶಿಲೆಯಲ್ಲಿ ಈ ಸುಂದರ ಪ್ರತಿಮೆ ಕಡೆದಿರುವ ಶಿಲ್ಪಿಯ ಕಲಾಕೌಶಲ್ಯ ಮನಸೆಳೆಯುತ್ತದೆ. ಗರ್ಭಗುಡಿಯ ಮುಂಭಾಗದಲ್ಲಿ ವೈಕುಂಠದ ದ್ವಾರಪಾಲಕರಾದ ಜಯವಿಜಯರ ಮೂರ್ತಿಗಳೂ ಇವೆ.

Turuvekere mahalakshmiಅಮ್ಮನವರ ಗುಡಿಯಲ್ಲಿ ಮಹಾಲಕ್ಷ್ಮಿಯ ಸುಂದರ ಮೂರ್ತಿಯಿಂದೆ.  ಮುಂದಿನ ಒಳಗಂಬದ ಮೇಲೆ ಭಕ್ತವಿಗ್ರಹವಿದ್ದು, ಇದು ದೇಗುಲ ಕಟ್ಟಿಸಿದ ಚೌಡಪ್ಪಯ್ಯ (ವರದ ಬೇಟೆರಾಯ)ರದು ಎಂದು ತೋರಿಸಲಾಗಿದೆ.

ಪ್ರತಿವರ್ಷ ಪಾಲ್ಗುಣ ಮಾಸದಲ್ಲಿ ಇಲ್ಲಿ ರಥೋತ್ಸವ ಜರುಗುತ್ತದೆ. ರಥೋತ್ಸವದ ಹಿಂದಿನ ದಿನ ನಡೆವ ಮಡೆ ಸಂತರ್ಪಣೆ ಪ್ರಮುಖ ಆಕರ್ಷಣೆ. ಆ ದಿನ ಹರಕೆಹೊತ್ತ ಬೇಟೇರಾಯನ ಒಕ್ಕಲಿನವರು ಭಕ್ತರು ಸುಬ್ಬಾ ಸುಬ್ಬಾ ಗೋವಿಂದ, ಸುಬ್ರಹ್ಮಣ್ಯ ಗೋವಿಂದ, ಕರಿಗಿರಿವಾಸ ಗೋವಿಂದ, ತುರುಗೆರೆವಾಸ ಗೋವಿಂದ, ಬಿಳಿಗಿರಿವಾಸ ಗೋವಿಂದ, ತಿಟ್ಟೆ ರಂಗ ಗೋವಿಂದ, ಗೋವಿಂದ ಗೋವಿಂದ ಎಂದು ಸ್ತುತಿಸುತ್ತಾ ಊಟ ಮಾಡಿದ ಎಲೆಗಳ ಮೇಲೆ ಉರುಳು ಸೇವೆ ಮಾಡುತ್ತಾರೆ. ಈ ದೇವಾಲಯದ ಎದುರು  ಗರುಡಗಂಭವಿದೆ. ರಥೋತ್ಸವದ ದಿನ ಗರುಡಪಕ್ಷಿ ಬಂದು ರಥದ ಮೇಲೆ ಮೂರು ಸುತ್ತು ಹಾಕುವುದು ಇಲ್ಲಿನ ವಿಶೇಷ.

ಮುಖಪುಟ /ನಮ್ಮ ದೇವಾಲಯಗಳು