ಮುಖಪುಟ /ನಮ್ಮ ದೇವಾಲಯಗಳು

ತುರುವೇಕೆರೆಯ ಗಂಗಾಧರೇಶ್ವರ ದೇವಾಲಯ

*ಟಿ.ಎಂ.ಸತೀಶ್

Turuvekere Gangadareswara, ತುರುವೇಕೆರೆ ಗಂಗಾಧರೇಶ್ವರಶಕಪುರುಷ ವಿಕ್ರಮಾದಿತ್ಯನನ್ನು ಮಣಿಸಿ ಹೊಶ ಶಕೆಗೆ ನಾಂದಿ ಹಾಡಿದ ಶಕಪುರುಷ ಶಾಲಿವಾಹನ ಹುಟ್ಟಿದ ತಾಲೂಕು ಎಂದೇ ಖ್ಯಾತವಾದ ತುಮಕೂರು ಜಿಲ್ಲೆ ತುರುವೇಕೆರೆ ದೇವಾಲಯಗಳ ತವರೂ ಹೌದು. ಇಲ್ಲಿರುವ ಪ್ರಸಿದ್ಧ ದೇವಾಲಯಗಳಲ್ಲಿ ಗಂಗಾಧರೇಶ್ವರ ದೇವಾಲಯ ಪ್ರಮುಖವಾದದ್ದು. ದ್ರಾವಿಡ ಶೈಲಿಯಲ್ಲಿರುವ ದೇವಾಲಯ ಉತ್ತರಾಭಿಮುಖವಾಗಿದೆ.

ಉತ್ತರಾಭಿಮುಖವಾಗಿರುವ ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಂಗಾಧರೇಶ್ವರನ ಶಿವಲಿಂಗ ವೈಶಿಷ್ಠ್ಯಪೂರ್ಣವಾಗಿದೆ. ಶಿವಲಿಂಗದ ಮೇಲೆ ಹೆಡೆಬಿಚ್ಚಿದ ನಾಗರಹಾವಿನೋಪಾದಿಯಲ್ಲಿರುವ ಗಂಗೆಯನ್ನು, ಸುರುಳಿ ಸುರುಳಿಯಾಕಾರದ ಕೇಶಪುಂಜವನ್ನೂ ಶಿಲ್ಪಿ ಮನೋಹರವಾಗಿ ಕಡೆದಿದ್ದಾನೆ. ಜಡೆಯಲ್ಲಿ ಬಂಧಿಯಾದ ಗಂಗೆಯ ಚಿಕ್ಕಮೂರ್ತಿ ಮನೋಜ್ಞವಾಗಿದೆ. ನಾಗಾಭರಣದ ಮೇಲೆ ಚಂದ್ರ, ಸೂರ್ಯ ಹಾಗೂ ಅಶ್ವಿನಿ, ಭರಣಿ, ಕೃತ್ತಿಕೆ, ರೋಹಿಣಿ ಮೊದಲಾದ 27 ನಕ್ಷತ್ರಗಳನ್ನೂ ಶಿಲ್ಪಿ ಮೂಡಿಸಿದ್ದಾನೆ.

ಈ ದೇವಾಲಯ ಪ್ರವೇಶಿಸುತ್ತಿದ್ದಂತೆ ಮಂಟಪದಲ್ಲಿರುವ ಕೃಷ್ಣಶಿಲೆಯ ಸುಂದರ ನಂದಿಯ ವಿಗ್ರಹ ಗಮನ ಸೆಳೆಯುತ್ತದೆ. Turuvekere Temple, ತುರುವೇಕೆರೆ ದೇವಾಲಯ, ಗಂಗಾಧರೇಶ್ವರ, ಬಸವಣ್ಣ, Basavannaನುಣುಪಾದ ಕಪ್ಪು ವರ್ಣದ ಏಕಶಿಲೆಯಲ್ಲಿ ಕೆತ್ತಲಾಗಿರುವ ಈ ನಂದಿಯಷ್ಟು ಸುಂದರವಾದ ನಂದಿ ಮತ್ತೊಂದಿಲ್ಲ ಎಂಬುದು ಅತಿಶಯೋಕ್ತಿಯಲ್ಲ. ನಂದಿಯ ವಿಗ್ರಹ ಸುಂದರ ಹಾಗೂ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ್ದು ಮನಮೋಹಕವಾಗಿದೆ. ನಂದಿಯ ವಿಗ್ರದ ಕೊರಳಲ್ಲಿ ಶಿಲ್ಪಿ ಗಂಟೆಗಳುಳ್ಳ ನಾಲ್ಕು ಸರಗಳನ್ನು ಕಲಾತ್ಮಕವಾಗಿ ಕೆತ್ತಿದ್ದಾನೆ. ನಂದಿಯ ಕಾಲುಗಳಲ್ಲಿಯೂ ಕಲಾತ್ಮಕ ಕೆತ್ತನೆಗಳಿವೆ.

ದೊಡ್ಡ ಪ್ರಾಕಾರವಿರುವ ಈ ದೇವಾಲಯದಲ್ಲಿ ಗಂಗಾಧರೇಶ್ವರ ಮತ್ತು ಪಾರ್ವತಿಯ ಗುಡಿಗಳಿವೆ. ಅಮ್ಮನವರ ಗುಡಿ ದೇವಾಲಯದ ಪ್ರವೇಶದ ಬಲಭಾಗದಲ್ಲಿ ಪೂರ್ವಾಭಿಮುಖವಾಗಿದ್ದರೆ,  ಗಂಗಾಧರೇಶ್ವರ ಗುಡಿ ಉತ್ತರಾಭಿಮುಖವಾಗಿದೆ. ಇಲ್ಲಿಯೂ ವಿಶಾಲವಾದ ಹಜಾರ, ಸುಖನಾಸಿ, ಗರ್ಭಗೃಹವಿದೆ.

ದೇವಾಲಯದ ಪೂರ್ವಭಾಗದಲ್ಲಿರುವ ಮಂಟಪದ ಕಂಬದಲ್ಲಿ ಬೇಡರ ಕಣ್ಣಪ್ಪನ ಉಬ್ಬುಶಿಲ್ಪವಿದೆ. ಶಿವರಾತ್ರಿಯ ದಿನ ಈ Turuvekere Temple, ತುರುವೇಕೆರೆ ದೇವಾಲಯ, ಗಂಗಾಧರೇಶ್ವರ, ಬಸವಣ್ಣ, Basavannaಮಂಟಪದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಇದೇ ಮಂಟಪದಲ್ಲಿ ಕಲ್ಲಿನ ಗಂಟೆಯಿದ್ದು, ಇದು ಕಂಚಿನ ಶಬ್ದ ಮಾಡುತ್ತದೆ.  ದೇಗುಲದ ಹೊರಭಾಗದಲ್ಲಿ ರಸ್ತೆಯಂಚಿನಲ್ಲಿರುವ ಕಲ್ಲಿನ ದೀಪಸ್ತಂಭದ ಮೇಲೆ ಭಕ್ತದಂಪತಿ ವಿಗ್ರಹವಿದ್ದು ಆ ವಿಗ್ರಹಗಳು ದೇವಾಲಯ ನಿರ್ಮಿಸಿದ ಅಣ್ಣಯ್ಯ ನಾಯಕ ಎಂಬ ಪಾಳೆಗಾರ ಹಾಗೂ ಆತನ ಪತ್ನಿಯದೆಂದು ಹೇಳಲಾಗುತ್ತದೆ. ಶಿವಲಿಂಗದ ಮೇಲೆ ಗಂಗೆಯನ್ನುಳ್ಳ ಸುಂದರ ಗಂಗಾಧರೇಶ್ವರನ ಮೂರ್ತಿ ಅತ್ಯಂತ ಮನಮೋಹಕವಾಗಿದೆ. ಪ್ರವಾಸೋದ್ಯಮ ಪಟ್ಟಿಯಲ್ಲಿ ತುರುವೇಕೆರೆಯೂ ಸೇರಿದೆ.

ವಾಣಿಜ್ಯ ಕೇಂದ್ರ: ವಿನೋಬನಗರ, ಸುಬ್ರಹ್ಮಣ್ಯನಗರ, ಗಾಂನಗರವೆಂಬ ವಿಸ್ತರಣೆಗಳನ್ನೊಳಗೊಂಡು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ತುರುವೇಕೆರೆ ಒಂದು ವಾಣಿಜ್ಯಕೇಂದ್ರ. ನಿಯಂತ್ರಿತ ಮಾರುಕಟ್ಟೆ, ನ್ಯಾಯಾಲಯವನ್ನೂ ಒಳಗೊಂಡ ಈ ಊರು ಒಂದು ಕಾಲದಲ್ಲಿ ಹತ್ತಿಯ ವಾಣಿಜ್ಯ ಕೇಂದ್ರವಾಗಿತ್ತು .

1960ರಲ್ಲಿ ತಾಲೂಕಿನ ಅಮ್ಮಸಂದ್ರದಲ್ಲಿ ಸಿಮೆಂಟ್ ಕಾರ್ಖಾನೆ ಸ್ಥಾಪಿಸಲಾಯಿತು. ಹೇಮಾವತಿ ನದಿಯ ಕಾಲುವೆಯ ನೀರಿನಿಂದ ವ್ಯವಸಾಯ ಕ್ಷೇತ್ರ ಸಮೃದ್ಧವಾಗಿದೆ. ಸುಸಜ್ಜಿತ ಕಾಲೇಜು ಇರುವ ತಾಲೂಕು ಕೇಂದ್ರ ಶಿಕ್ಷಣ ಶ್ರೀಮಂತವಾಗಿದೆ. 1676ರಲ್ಲಿ ತುರುವೇಕೆರೆ ಮೈಸೂರು ರಾಜ ಮನೆತನದ ಚಿಕ್ಕದೇವರಾಯರ ಆಳ್ವಿಕೆಗೂ ಒಳಪಟ್ಟಿತ್ತು.

ತುರುವೇಕೆರೆಗೆ ನೇರವಾಗಿ ರೈಲು ಮಾರ್ಗವಿಲ್ಲದಿದ್ದರೂ, ತಾಲೂಕಿನ ಬಾಣಸಂದ್ರದಲ್ಲಿ ರೈಲು ನಿಲ್ಣಾಣವಿದ್ದು, ಬೆಂಗಳೂರು- ಪುಣೆ ರೈಲು ಮಾರ್ಗವನ್ನು ಇದು ಸಂದಿಸುತ್ತದೆ. ಬಾಣಸಂದ್ರದಿಂದ ತುರುವೇಕೆರೆಗೆ 13 ಕಿ.ಮೀಟರ್. ಬೆಂಗಳೂರಿನಿಂದ 120 ಕಿ.ಮೀಟರ್ ದೂರದಲ್ಲಿರುವ ತುರುವೇಕೆರೆಗೆ ರಾಜ್ಯದ ಎಲ್ಲ ಪ್ರಮುಖ ಪಟ್ಟಣಗಳಿಂದಲೂ ನೇರ ಬಸ್ ಸೌಕರ್ಯವಿದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮ ದೇವಾಲಯಗಳು