ಮುಖಪುಟ /ನಮ್ಮದೇವಾಲಯಗಳು   

ತುರುವೇಕೆರೆಯ ಗ್ರಾಮದೇವತೆ ಶಕ್ತಿ ಸ್ವರೂಪಿಣಿ ಉಡುಸಲಮ್ಮ

ಲೇಖಕರು: ಟಿ.ಎಂ. ಸತೀಶ್

udusilamma, turuvekere, ಉಡುಸಿಲಮ್ಮ, ತುರುವೇಕೆರೆ ಗ್ರಾಮದೇವತೆಕಲ್ಪತರುವಿನ ನಾಡು ತುರುವೇಕೆರೆ ತುಮಕೂರು ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ. ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾದ ಈ ಊರನ್ನು ಗ್ರಾಮದೇವತೆ ಉಡುಸಲಮ್ಮ ಸಲಹುತ್ತಿದ್ದಾಳೆ.

ಉಡುಸುಲಮ್ಮ ತುರುವೇಕೆರೆ ಹುಟ್ಟಿದಾಗಿನಿಂದ ಊರಿನಲ್ಲಿ ನೆಲೆಗೊಂಡು ಶಕ್ತಿ ದೇವತೆಯಾಗಿ ಗ್ರಾಮದ ಜನರನ್ನು ಸಕಲ ಸಂಕಷ್ಟದಿಂದ ಪಾರು ಮಾಡುತ್ತಾ ಐಶ್ವರ್ಯದಾಯಿನಿಯಾಗಿ, ಸಂತಾನ ದೇವತೆಯಾಗಿ, ಸಕಲ ರೋಗ ನಿವಾರಕಿಯಾಗಿ ಸಲಹುತ್ತಿದ್ದಾಳೆ ಎಂಬುದು ಗ್ರಾಮದ ಜನರ ಬಲವಾದ ನಂಬಿಕೆ.

ಹಿಂದೆ ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ಲೇಗ್, ಸಿಡುಬು ಇತ್ಯಾದಿ ಮಾರಕ ರೋಗಳನ್ನು ನಿವಾರಿಸುವಂತೆ ಗ್ರಾಮದೇವತೆಯ ಮೊರೆ ಹೋಗುತ್ತಿದ್ದರು. ಹೀಗಾಗೇ ಪ್ರತಿವರ್ಷ ಚೈತ್ರ ಮಾಸದ ಹುಣ್ಣಿಮೆಯ ನಂತರದ ಶುಕ್ರವಾರ ಉಡುಸುಲಮ್ಮನ ಹಬ್ಬ ನಡೆಯುತ್ತದೆ.  ಗಂಗಟಕಾರ ಗೌಡ ವಂಶಸ್ಥರು (ಊರಿನ ಪಟೇಲರು)  ಹಿಂದೆ ಈ ಊರನ್ನಾಳಿದ ಪಾಳೆಯಗಾರರು ಹಾಕಿಕೊಟ್ಟ ಮಾರ್ಗದಲ್ಲಿ ಇಂದಿಗೂ ಇಲ್ಲಿ ಚೈತ್ರಪೂಜೆ, ಸಿಡಿ, ಸೋಮನಕುಣಿತವೇ ಮೊದಲಾದ ಕೈಂಕರ್ಯಗಳು ನಡೆಸುತ್ತಾರೆ.

udusilamma, turuvekere, ಉಡುಸಿಲಮ್ಮ, ತುರುವೇಕೆರೆ ಗ್ರಾಮದೇವತೆಶುಕ್ರವಾರ ಬೆಳಗ್ಗೆ ಊರಿನ ಬ್ರಾಹ್ಮಣ ಕುಲದವರು ಗ್ರಾಮ ದೇವತೆಗೆ ಪುಣ್ಯಾಹದ ನಂತರ ತಂಬಿಟ್ಟಿನ ಆರತಿ ಬೆಳಗಿ ಪೂಜೆ ಸಲ್ಲಿಸಿದರೆ, ಅಂದು ಸಂಜೆ ಹಾಗೂ ಮಾರನೆಯ ದಿನ ಪುರಜನರು ಹೊಂಬಾಳಿ ಸೀಳಿ ಪೂಜೆ ಸಲ್ಲಿಸುತ್ತಾರೆ. ಸುತ್ತಮುತ್ತಲ ಗ್ರಾಮದ ಜನರು, ಅಗ್ನಿ ಕ್ಷತ್ರಿಯ ವಂಶಸ್ಥರು ಬಲಿ ನೀಡುತ್ತಾರೆ. ರಥೋತ್ಸವ ಹಾಗೂ ಶುಕ್ರವಾರ ಸಂಜೆ ನಡೆಯುವ ಸಿಡಿ ಮತ್ತು ಸೋಮನಕುಣಿತ ಇಲ್ಲಿನ ಪ್ರಧಾನ ಆಕರ್ಷಣೆ.

ಸಿಡಿ ಒಂದು ಜಾನಪದ ಆಚರಣೆ. ದೇಹ ದಂಡನೆಯ ಮೂಲಕ ದೇವಿಯನ್ನು ಒಳಿಸಿಕೊಳ್ಳುವ ಹರಕೆ. ಅಂದು ಹರಕೆ ಹೊತ್ತ ಸಿಡಿ ಆಡುವ ನೇಮಿಷ್ಠರು ಮೈಗೆಲ್ಲಾ ಹರಿಶಿನ ಹಚ್ಚಿಕೊಂಡು, ಒಂದು ಕೈಯಲ್ಲಿ ಖಡ್ಗ ಹಿಡಿದು ಝಳಪಿಸುತ್ತಾ ಇನ್ನೊಂದು ಕೈಯಲ್ಲಿ ಹೊಂಬಾಳೆ ಹಿಡಿದು ಉಡುಸಲಮ್ಮನ ಭಂಟರಾದ ಸೋಮರನ್ನು ಹೆದರಿಸುತ್ತಾ ಬಲಿ ಪಡೆದು ಊರಿನಲ್ಲಿರುವ ಶ್ರೀ ವರದ ಬೇಟೇರಾಯಸ್ವಾಮಿ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿ ರಾಜ ಬೀದಿಗಳಲ್ಲಿ ಸಂಚರಿಸಿ ದೇವಾಲಯಕ್ಕೆ ಬರುತ್ತಾರೆ.

udusilamma, turuvekere, ಉಡುಸಿಲಮ್ಮ, ತುರುವೇಕೆರೆ ಗ್ರಾಮದೇವತೆದೇವಾಲಯದ ಮುಂದೆ ಇರುವ ಸಿಡಿ ಕಂಬಕ್ಕೆ ಸಿಡಿ ಆಡುವವರನ್ನು ಕಟ್ಟಲಾಗುತ್ತದೆ. ನಂತರ ಸಿಡಿ ಕಂಬವನ್ನು ಮೇಲೆ ಎತ್ತಿ ತಿರುಗಿಸಲಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಅಪರೂಪವಾದ ಇಂಥ ಆಚರಣೆ ನೋಡಲು ದೂರದೂರುಗಳಿಂದ ಸಹಸ್ರಾರು ಜನರು ಆಗಮಿಸುತ್ತಾರೆ.

ತುರುವೇಕೆರೆ ಬಸ್ ನಿಲ್ದಾಣದಿಂದ ಬಾಣಸಂದ್ರಕ್ಕೆ ಹೋಗುವ ರಸ್ತೆಯಲ್ಲಿ ಕೆರೆಯ ದಂಡೆಯ ಮೇಲೆ ಉಡುಸುಲಮ್ಮನ ದೇವಾಲಯವಿದೆ. ಸುಂದರವಾದ ದೇವಾಲಯದ ಮುಂದೆ ರಥೋತ್ಸವ ಮಂಟಪ ಹಾಗೂ ಸಿಡಿ ಕಂಬವಿದೆ.

ದೇವಾಲಯದ ಮುಂದೆ ಸುಂದರವಾದ ಚಿಕ್ಕ ಕೈತೋಟವಿದೆ. ಪಕ್ಕದಲ್ಲಿ ಅಶ್ವತ್ಥಕಟ್ಟೆ ಹಾಗೂ ನಾಗರಕಲ್ಲುಗಳಿವೆ. ಪಕ್ಕದಲ್ಲಿ ಕನ್ಯಕಾಪರಮೇಶ್ವರಿ ದೇವಾಲಯವಿದೆ. ಪ್ರಧಾನ ದೇವಾಲಯ ಪ್ರವೇಶಿಸಿದರೆ ಒಳಗೆ ಎರಡೂ ಕೈಯಲ್ಲಿ ಮಕ್ಕಳನ್ನು ಹಿಡಿದ ದೇವಿಯ ಗಣದ ಪ್ರತಿಮೆ ಹಾಗೂ ಕೈಯಲ್ಲಿ ಖಡ್ಗ ಹಾಗೂ ಕತ್ತರಿಸಿದ ರುಂಡ ಹಿಡಿದ ರಾಕ್ಷಸ ಗಣದ ಪ್ರತಿಮೆ ಇದೆ.

udusilamma, turuvekere, ಉಡುಸಿಲಮ್ಮ, ತುರುವೇಕೆರೆ ಗ್ರಾಮದೇವತೆಗರ್ಭಗೃಹದಲ್ಲಿ ಸುಂದರವಾದ ಹಾಗೂ ಮಂದಸ್ಮಿತೆಯಾದ ಉಡುಸುಲಮ್ಮನ ಪ್ರತಿಮೆ ಇದೆ. ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ ಡಮರು ಹಾಗೂ ಮಗದೊಂದು ಕೈಯಲ್ಲಿ ಭರಣಿ ಮತ್ತು ನಾಲ್ಕನೆ ಕೈಯಲ್ಲಿ ಕತ್ತರಿಸಿದ ರುಂಡ ಹಿಡಿದ ದೇವಿಯ ಮುಖ ಕೆಂಪುವರ್ಣದ್ದಾದರೂ, ಕೋರೆಯ ಹಲ್ಲುಗಳಿದ್ದರೂ ತಾಯಿ ಉಗ್ರ ಸ್ವರೂಪದ ಬದಲು ಶಾಂತಸ್ವರೂಪದಲ್ಲಿ ಇಲ್ಲಿ ನೆಲೆಸಿದ್ದಾಳೆ.

ದೇವಿಯ ಹಿಂದಿರುವ ಪ್ರಭಾವಳಿಯಲ್ಲಿ  ಸಿಂಹಮುಖ ಹಾಗೂ ನಾಗರಹಾವುನ್ನು ಕಡೆಯಲಾಗಿದೆ. ಮಹಿಮಾನ್ವಿತಳಾದ ತಾಯಿಯ ದರ್ಶನಕ್ಕೆ ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ.

ತುರುವೇಕೆರೆಯ ಹಾಗೂ ಸುತ್ತಮುತ್ತಲ ಇತರ ದೇವಾಲಯಗಳು:

1. ಮೂಲಶಂಕರ ದೇವಾಲಯ, 2. ಗಂಗಾಧರೇಶ್ವರ ದೇವಾಲಯ, 3.ಬೇಟೆರಾಯಸ್ವಾಮಿ ದೇವಾಲಯ, 4. ಚನ್ನಕೇಶ್ವರ ಸ್ವಾಮಿ ದೇವಾಲಯ, 5.ನೂರೊಂದು ದೇವರಗುಡಿ, 6. ಅರಳುಗುಪ್ಪೆ ಚನ್ನಕೇಶ್ವರ ದೇವಾಲಯ, 7.ಅರಳುಗುಪ್ಪೆ ಕಲ್ಲೇಶ್ವರ ದೇವಾಲಯ.

ಮುಖಪುಟ /ನಮ್ಮದೇವಾಲಯಗಳು