ಮುಖಪುಟ /ನಮ್ಮದೇವಾಲಯಗಳು   

ಎಡೆಯೂರು ಪವಾಡಪುರುಷ ಸಿದ್ಧಲಿಂಗೇಶ್ವರರ ನೆಲೆವೀಡು

ಧರ್ಮ ಕರ್ಮದ ತವರು

*ಟಿ.ಎಂ.ಸತೀಶ್

Yedeyuru Siddalingeswara swamy, ಯಡೆಯೂರು ಸಿದ್ದಲಿಂಗೇಶ್ವರಸ್ವಾಮಿಹರಿಹರ ಕ್ಷೇತ್ರ ಎಂದೇ ಖ್ಯಾತವಾದ ತುಮಕೂರು ಜಿಲ್ಲೆಯಲ್ಲಿ ವಿಷ್ಣು ಕ್ಷೇತ್ರಗಳಷ್ಟೇ, ಶೈವ ಕ್ಷೇತ್ರಗಳೂ ಇವೆ.  ಜಿಲ್ಲೆಯ ಹಲವು ಕ್ಷೇತ್ರಗಳು ಭೂಕೈಲಾಸ ಎಂದೇ ಖ್ಯಾತಿ ಪಡೆದಿವೆ. ಶಿವಾಂಶ ಸಂಭೂತರಾದ ಅನೇಕ ಮಹಿಮಾನ್ವಿತರು ಈ ನೆಲದಲ್ಲಿ ಜನಿಸಿ ಇಲ್ಲವೇ ಬೇರೆಡೆಯಿಂದ ಬಂದು ನೆಲೆಸಿ, ತಪವನ್ನಾಚರಿಸಿ. ತುಮಕೂರು ಜಿಲ್ಲೆಯನ್ನು ಧರ್ಮ -ಕರ್ಮದ ತವರಾಗಿಸಿದ್ದಾರೆ. ಇಂಥ ಸಿದ್ಧಪುರುಷರಿಂದ ಪುನೀತವಾದ ಪವಿತ್ರ ಪುಣ್ಯಕ್ಷೇತ್ರವೇ ಎಡೆಯೂರು.

ಬೆಂಗಳೂರು ಮಂಗಳೂರು ಹೆದ್ದಾರಿ 48ರಲ್ಲಿ ಕುಣಿಗಲ್ ದಾಟಿ 24 ಕಿ.ಮೀ. ಸಾಗಿದ ಬಳಿಕ ಹೆದ್ದಾರಿಯ ಎಡ ಭಾಗದಲ್ಲೇ ಇರುವ ಯಡೆಯೂರು ಅಥವಾ ಎಡೆಯೂರು ಸಿಗುತ್ತದೆ.  ಎಲ್ಲ, ಜಾತಿ, ಮತ, ಪಂಗಡದವರೂ ಪೂಜಿಸುವ 15ನೇ ಶತಮಾನದ ಪವಾಡಪುರುಷ ನಿರಂಜನ ಗಣಪನ ಅಪರಾವತಾರರಾಗಿದ್ದ ಶ್ರೀಸಿದ್ಧಲಿಂಗೇಶ್ವರರ ತಪೋಭೂಮಿ. ಐಕ್ಯಸ್ಥಳ ಇದಾಗಿದೆ. ಶ್ರೀಸಿದ್ಧಲಿಂಗೇಶ್ವರರ ಸ್ವಾಮಿಯವರು ಇಲ್ಲಿ ಜೀವಂತ ಸಮಾಧಿಯಾಗಿದ್ದಾರೆ.  ಇಲ್ಲಿ ದಾನಿಗಳಾದ ಚೆನ್ನವೀರಪ್ಪ ಒಡೆಯರು ಕಟ್ಟಿಸಿದ ದ್ರಾವಿಡ ಶೈಲಿಯ ಬೃಹತ್ ಭವ್ಯ ದೇವಾಲಯವೂ ಇದೆ. ಶಿಥಿಲವಾಗಿದ್ದ ಈ ದೇವಾಲಯವನ್ನು ಈಗ ಜೀರ್ಣೋದ್ಧಾರ ಮಾಡಲಾಗಿದೆ.

Yedeyuru Siddalingeswara swamy, ಯಡೆಯೂರು ಸಿದ್ದಲಿಂಗೇಶ್ವರಸ್ವಾಮಿಯಡೆಯೂರಿನ ಇತಿಹಾಸ ಆರಂಭವಾಗುವುದು ಸುಮಾರು ಕ್ರಿ.ಶ. 15ನೇ ಶತಮಾನದಿಂದ. ಈಗಿನ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿಯ ಮಲ್ಲಿಕಾರ್ಜುನ ಮತ್ತು ಜ್ಞಾನಾಂಬೆ ದಂಪತಿಯ ಮಗನಾಗಿ 15ನೇ ಶತಮಾನದಲ್ಲಿ ಜನಿಸಿದ ಸಿದ್ದಲಿಂಗೇಶ್ವರರು  ತಮ್ಮ ಎಂಟನೇ ವಯಸ್ಸಿನಲ್ಲಿಯೇ ಗೋಸಲ ಮಠದ ಗುಬ್ಬಿ ಚನ್ನಬಸವೇಶ್ವರ ಶಿವಯೋಗಿಗಳಿಂದ ದೀಕ್ಷೆ ಪಡೆದರೆಂದೂ, ನಂತರ 701 ವಿರಕ್ತರೊಂದಿಗೆ ಆಸೇತು  ಹಿಮಾಚಲ ಪರ್ಯಂತ  ಸಂಚರಿಸಿದರೆಂದೂ. ಅಲ್ಲಿಂದ  ಬಂದ ನಂತರ  ಚಿತ್ರಾಮಠದಲ್ಲಿ ಕೆಲ ಕಾಲ ಕಳೆದು ಬೋಳು ಬಸವರಾಜೇಂದ್ರರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿ  ಯಡೆಯೂರು ಬಳಿಯ ಕಗ್ಗೆರೆಗೆ ಬಂದು ಇಲ್ಲಿನ ತೋಟವೊಂದರಲ್ಲಿ 12 ವರ್ಷಗಳ ಕಾಲ ಕಠಿಣ ತಪಸ್ಸನ್ನಾಚರಿಸಿ  ನಾಗಿನಿ ನದಿಯ ಎಡದಂಡೆ ಮೇಲಿರುವ ಎಡೆಯೂರಿನಲ್ಲಿ  ಸಜೀವ ಸಮಾಧಿಯಾದರೆಂದು ಐತಿಹ್ಯ ಹೇಳುತ್ತದೆ.  ತೋಟದಲ್ಲಿ ತಪಸ್ಸು ಆಚರಿಸಿದ್ದ ಇವರಿಗೆ ತೋಂಟದ ಸಿದ್ಧಲಿಂಗ ಎಂಬ ಹೆಸರೂ ಇದೆ.

ಸಿದ್ಧಲಿಂಗೇಶ್ವರರು ಎಡೆಯೂರಿಗೆ ಬಂದು ನೆಲೆಸುವ ಮುನ್ನ ಸೌರಾಷ್ಟ್ರ, ಕೊಲ್ಲಿ, ಪಾಕಿಸ್ತಾನ, ಕೇದಾರ, ಚಿದಂಬರ, ಶ್ರೀರಂಗ, ಕಂಚಿ, ಕಾಳಹಸ್ತಿ, ಅರುಣಾಚಲ... ಹೀಗೆ ಆಸೇತು ಹಿಮಾಚಲ ಪರ್ಯಂತ ಸಂಚರಿಸಿ, ಪವಾಡ ತೋರಿ, ವೀರಶೈವಧರ್ಮ ಪುನರುಜ್ಜೀವನಗೊಳಿಸಿದರು.  ಈಹೊತ್ತು ಎಡೆಯೂರಿನಲ್ಲಿ ನಿರ್ವಿಕಲ್ಪ ಸಮಾಧಿಯಲ್ಲಿರುವ ಸಿದ್ದಲಿಂಗೇಶ್ವರರು ಬರುವ ಭಕ್ತರ ಕಷ್ಟವನ್ನು ನೀಗಿಸಿ, ಮುಕ್ತಿ ನೀಡುತ್ತಾರೆಂಬುದು ನಂಬಿಕೆ.

ಇಲ್ಲಿರುವ ಯತಿಗಳ ಗದ್ದುಗೆ ಶಿವಭಕ್ತರಿಗೆ ತೀರ್ಥಕ್ಷೇತ್ರವಾಗಿದೆ. ಎಡೆಯೂರಿಗೆ ಹೋಗುತ್ತಿದ್ದಂತೆ 7 ಅಂತಸ್ತಿನ ಭವ್ಯ ಗೋಪುರ ಸ್ವಾಗತಿಸುತ್ತದೆ. ಮೇಲೆ  ಕಳಶಗಳಿವೆ. ಗೋಪುರದಲ್ಲಿ ಸಿದ್ಧಲಿಂಗೇಶ್ವರರ, ಮಹಿಮೆ ಸಾರುವ ಹಲವು ಪ್ರಸಂಗಗಳ ಗಾರೆಯ ಶಿಲ್ಪಗಳಿವೆ. ದ್ವಾರಬಂಧದಿಂದ ಒಳ ಪ್ರವೇಶಿಸುತ್ತಿದ್ದಂತೆ ದೇವಾಲಯದ ಮೇಲಿನ Yedeyuru Siddalingeswara swamy, ಯಡೆಯೂರು ಸಿದ್ದಲಿಂಗೇಶ್ವರಸ್ವಾಮಿ ರಥೋತ್ಸವಬೃಹತ್ ನಂದಿ ಸ್ವಾಗತ ಕೋರುತ್ತದೆ. ಅಲ್ಲಿರುವ ಗಣಪ ಭಕ್ತರನ್ನು ಹರಸುತ್ತಾನೆ. ವಿಶಾಲವಾದ ಒಳ ಪ್ರಕಾರದಲ್ಲಿ, ಯತಿಗಳು ತಮ್ಮ ಗುರುಗಳು ಶಿವಪೂಜೆಯಲ್ಲಿದ್ದಾಗ ಕಮಂಡಲದಿಂದ ನೀರು ಹಾಕಿ ಜ್ಯೋತಿ ಉರಿಸಿದ, ಕಲ್ಲು ಬಸವಣ್ಣನಿಗೆ ಎಡೆ ನೀಡಿದ, ಅರುಣಾಚಲದಲ್ಲಿ ಈಶ್ವರನು ಪ್ರತ್ಯಕ್ಷನಾಗಿ ಸಿದ್ದಲಿಂಗೇಶ್ವರರಿಗೆ ಪಂಚತಾವಡ ಹಾರ ನೀಡಿದ, ಗಂಗಾವತರಣ ಮಾಡಿದ.. ಹೀಗೆ ಅವರ ಪವಾಡಗಳನ್ನು ಸಾರುವ ಗಾರೆಯ ಶಿಲ್ಪಗಳನ್ನು ನಿರ್ಮಿಸಲಾಗಿದೆ. ಧ್ಯಾನಸಮಾಧಿಯಲ್ಲಿದ್ದಾಗ, ಯತಿಗಳ ಮೇಲೆ ಹುತ್ತ ಬೆಳೆದದ್ದು, ಅವರಿಗೆ ಕಾಮಧೇನು ಸ್ವಯಂಪ್ರೇರಿತಳಾಗಿ ಕ್ಷೀರಧಾರೆ ಹರಿಸಿ ದಣಿವಾರಿಸಿದ ಚಿತ್ರಣಗಳೂ ಇವೆ. ದೇವಾಲಯ ಕಟ್ಟಿಸಿದ ಚೆನ್ನವೀರಪ್ಪ ಮತ್ತು ಆತನ ಪತ್ನಿ ಪಾರ್ವತಮ್ಮನವರ ಚಿತ್ರವೂ ಇದೆ. ಶಿವನ 25 ಲೀಲೆಗಳನ್ನೂ ಇಲ್ಲಿ ಚಿತ್ರಿಸಲಾಗಿದೆ.

ಯತಿಗಳ ಸ್ಮರಣಾರ್ಥ ಕಟ್ಟಿಸಲಾಗಿರುವ ದೇವಾಲಯವಿದೆ. ರಜತದ್ವಾರದಿಂದ ಕಗೊಂಳಿಸುವ ಗರ್ಭಗುಡಿಯಲ್ಲಿರುವ ಸ್ವಾಮಿಗಳ ಗದ್ದುಗೆ. ಸುವರ್ಣ ಮುಖವಾಡದ ವಿಭೂತಿಲಿಂಗ ಹಾಗೂ ಉತ್ಸವ ಮೂರ್ತಿಯಿದೆ. ಮುಖ್ಯ ದ್ವಾರದಲ್ಲಿ ಗುರು ಸಿದ್ಧಲಿಂಗೇಶ್ವರರು ತಪಸ್ಸನ್ನಾಚರಿಸುತ್ತಿರುವ ಸುಂದರ ಪ್ರತಿಮೆಯನ್ನು ನಿರ್ಮಿಸಲಾಗಿದ್ದು ಅಂತ್ಯಂತ ಆಕರ್ಷಕವಾಗಿದೆ.

Yedeyuru Siddalingeswara swamy, ಯಡೆಯೂರು ಸಿದ್ದಲಿಂಗೇಶ್ವರಸ್ವಾಮಿಈ ಪವಿತ್ರ ಪುಣ್ಯಕ್ಷೇತ್ರಕ್ಕೆ ಚಾರಿತ್ರಿಕ ಹಿನ್ನೆಲೆ ಇದೆ. ಇಲ್ಲಿ ನೆಲೆಸಿಹ ಶ್ರೀತೋಂಟದ ಸಿದ್ಧಲಿಂಗ ಶಿವಯೋಗಿಗಳು ಮಾನವ ಸಹಜ ದೇಹಧಾರಣೆ ಮಾಡಿ ಅವತರಿಸಿದರೂ, ತಮ್ಮ ಅನುಪಮ ಸಿದ್ಧಿ ಹಾಗೂ ಪವಾಡಗಳಿಂದ ಜಗತ್ಕಲ್ಯಾಣ ಮಾಡಿದರೆಂದು ಸಿದ್ದೇಶ್ವರ ಪುರಾಣದಲ್ಲಿ ಉಲ್ಲೇಖವಿದೆ.

ಯತಿಗಳು ಈ ಕ್ಷೇತ್ರದಲ್ಲಿ ನೆಲೆಸಿದ ಬಗ್ಗೆ ಕೂಡ ಒಂದು ಕಥೆ ಇದೆ. ಕ್ಷೇತ್ರದ ಬಳಿಯೇ ಇರುವ ಕಗ್ಗೆರೆಯ ನಿವಾಸಿ ನಂಬಿಯಣ್ಣಶೆಟ್ಟಿ ಎಂಬುವನಿಂದ ಬಿನ್ನಹ ಪಡೆದು, ಭಸಿತವನ್ನು ಸ್ವೀಕರಿಸಿದ್ದರಿಂದ ಸ್ಥಳ ಬಿಟ್ಟು ಹೋಗಲಾರದೆ ಅಲ್ಲೇ ಮರವೊಂದರ ಕೆಳಗೆ ಧ್ಯಾನದಲ್ಲಿ ಮಗ್ನರಾಗುತ್ತಾರೆ. ಹೀಗೆ ಕಗ್ಗೆರೆಯ ಪುಷ್ಪವನದಲ್ಲಿರಲು, ದಾಳಿಕೋರರು ಕಗ್ಗೆರೆಯನ್ನು ಲೂಟಿ ಮಾಡಲಿರುವ ವಿಚಾರವನ್ನು ತಮ್ಮ ತಪಶ್ಶಕ್ತಿಯಿಂದ ಗ್ರಹಿಸಿದ ಯತಿಗಳು, ಆ ವಿಚಾರವನ್ನು ಗಿರಿಯಣ್ಣಗೌಡ ಎಂಬ ಊರಿನ ಮುಖ್ಯನಿಗೆ ತಿಳಿಸಿ, ಊರು ಬಿಡುವಂತೆ ಸೂಚಿಸುತ್ತಾರೆ. ಅವರ ಮಾತಿನಂತೆ ಎಲ್ಲರೂ ಊರು ಬಿಟ್ಟು ಬೇರೆ ಪಟ್ಟಣ ಸೇರುತ್ತಾರೆ. 12 ವರ್ಷ ಬಳಿಕ ಮತ್ತೆ ಕಗ್ಗೆರೆಯನ್ನು ಪುನರ್ನಿರ್ಮಾಣ ಮಾಡಿ ಅಲ್ಲಿಗೆ ಆಗಮಿಸಿದಾಗ, ನಂಬಿಯಣ್ಣನ ಹಸು ಪ್ರತಿದಿನ ಹೂತೋಟದಲ್ಲಿದ್ದ ಹುತ್ತಕ್ಕೆ ಹಾಲು ಕರೆದು ಬರುವುದನ್ನು ಕಂಡು, ಹುತ್ತಕ್ಕೆ ಕ್ಷೀರಾಭಿಷೇಕ ಮಾಡಿ ಕರಗಿಸಿದಾಗ ಶ್ರೀಗಳು ಅಲ್ಲಿ ತಪವನ್ನಾಚರಿಸಿದರಂತೆ. ತೋಟದಲ್ಲಿ ಶ್ರೀಗಳು ನೆಲೆಸಿದ್ದರಿಂದ ಅವರಿಗೆ ತೋಂಟದ ಯತಿಗಳೆಂದೇ ಹೆಸರಾಯ್ತು ಎಂಬುದು ಸ್ಥಳ ಪುರಾಣ.

Yedeyuru Siddalingeswara swamy, ಯಡೆಯೂರು ಸಿದ್ದಲಿಂಗೇಶ್ವರಸ್ವಾಮಿಶೈವರಿಗೆ ಮಹಾ ಪವಿತ್ರವಾದ ಈ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆಯೂ ಅಪಾರ. ಯುಗಾದಿಯ ಬಳಿಕ ಇಲ್ಲಿ ಪ್ರತಿವರ್ಷ ಚೈತ್ರ ಮಾಸದಲ್ಲಿ ಜಾತ್ರೆ ನಡೆಯುತ್ತದೆ. ಕಾರ್ತೀಕ ಮಾಸದಲ್ಲಿ ಲಕ್ಷ ದೀಪೋತ್ಸವ, ಅಡ್ಡ ಪಲ್ಲಕ್ಕಿ ಉತ್ಸವ ಜರುಗುತ್ತದೆ. ಆಗ ನಡೆಯುವ ಬಾಣ ಬಿರುಸಿನ ವೈಭವ ಕಣ್ಮನ ಸೆಳೆಯುತ್ತದೆ.

ಈಗ ಭಕ್ತರಿಂದ ದೇಣಿಗೆ ಬಂದ ಚಿನ್ನದಿಂದ ಶ್ರೀಸಿದ್ಧಲಿಂಗೇಶ್ವರರಿಗೆ 9 ಲಕ್ಷ ರುಪಾಯಿ ಮೌಲ್ಯದ ಚಿನ್ನದ ಮುಖವಾಡ ಮಾಡಲಾಗಿದೆ. 320 ಕೆ.ಜಿ. ತೂಕದ ಬೆಳ್ಳಿಯ ರಥವೂ ಸಿದ್ಧಗೊಂಡಿದೆ. ರಥದಲ್ಲಿನ ಕೆತ್ತನೆ ಕಣ್ಮನಸೆಳೆಯುತ್ತದೆ.

ದೇಗುಲದ ಸನಿಹದಲ್ಲೇ ಬಾಳೆಹೊನ್ನೂರು ಮಠದ ಶಾಖಾ ಮಠವಿದೆ. ಸನಿಹದಲ್ಲೇ ಮಾರ್ಕೋನಹಳ್ಳಿ ಜಲಾಶಯವಿದೆ.

ಮುಖಪುಟ /ನಮ್ಮದೇವಾಲಯಗಳು